ಎಸ್ ಪಿಗೆ ಫೋನ್ ಮಾಡಿ ಸಮಸ್ಯೆ ಹೇಳಿಕೊಂಡ ಜನತೆ
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಎಸ್ ಪಿ ಡಾ. ಸಂಜೀವಕುಮಾರ ಅವರು ಶನಿವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿದೆ, ಬೆಳಗಾವಿ ಜಿಲ್ಲೆಯಲ್ಲದೇ ಹೊರ ಜಿಲ್ಲೆಯಿಂದಲೂ ಕರೆಗಳು ಬಂದಿವೆ. ಒಟ್ಟು 65 ಜನ ಕರೆ ಮಾಡಿ ನಾನಾ ಸಮಸ್ಯೆ ಹೇಳಿಕೊಂಡರು.
ಯಾವ್ಯಾವ ದೂರು ?
ಗೋಕಾಕದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಸಭೆಗೆ ಆಹ್ವಾನಿಸದ ಬಗ್ಗೆ ವ್ಯಕ್ತಿಯೊಬ್ಬರು ಫೋನ್ ಮಾಡಿ ಅಹವಾಲು ಸಲ್ಲಿಸಿದ್ದಾರೆ. ಚಿಕ್ಕೋಡಿಯಿಂದ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಕೋರಿ ಫೋನ್ ಕರೆ ಬಂದಿದೆ. ಟ್ರ್ಯಾಕ್ಟರ್ ಗಳಲ್ಲಿ ಧ್ವನಿವರ್ಧಕವನ್ನು ಜೋರಾಗಿ ಹಚ್ಚುವ ಬಗ್ಗೆ ಬಳಷ್ಟು ಕಡೆಯಿಂದ ದೂರುಗಳು ಬಂದಿದೆ.
ಉಳಿದಂತೆ, ಆಸ್ತಿ ವಿವಾದ, ಬಾರ್ ಗಳನ್ನು ಸಮಯದ ಮಿತಿಯೊಳಗೆ ಬಂದ್ ಮಾಡಲು ಆಗ್ರಹಿಸಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೂ ಫೋನ್ ಇನ್ ನಡೆಯಿತು. ಎಸ್ ಪಿ ಡಾ. ಸಂಜೀವ ಪಾಟೀಲ್ ಅವರು ಎಲ್ಲ ಸಮಸ್ಯೆಗಳನ್ನು ಅತ್ಯಂತ ವ್ಯವಧಾನದಿಂದ ಕೇಳಿ , ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.
ಯು ಟ್ಯೂಬ್ ಚಾನಲ್ ಕಾಟ
ಯೂಟ್ಯೂಬ್ ಚಾನಲ್ ವರದಿಗಾರ ಹಣಕ್ಕಾಗಿ ಸತಾಯಿಸುತ್ತಿದ್ದಾನೆ. ಅವನ ಮೇಲೆ ಕ್ರಮ ಜರುಗಿಸಬೇಕೆಂದು ಗ್ರೂಪ್ ಸಿ ಮಹಿಳಾ ಅಧಿಕಾರಿಯೊಬ್ಬರು ಎಸ್ಪಿ ಸಂಜೀವ ಪಾಟೀಲ ಅವರಿಗೆ ಫೋನ್ ಮಾಡಿ ದೂರಿದರು.
ಇದಕ್ಕೆ ಸ್ಪಂದಿಸಿದ ಎಸ್ಪಿ ಅವರು ನೀವು ಧ್ಯೈರ್ಯವಾಗಿ ನಿಮಗೆ ಹೆದರಿಸುತ್ತಿರುವ ಯೂಟ್ಯೂಬ್ ಚಾನಲ್ ವರದಿಗಾರನ ಮೇಲೆ ದೂರು ನೀಡಿದರೆ ಮಜಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಮೊದಲು ದೂರು ನೀಡಿ ಎಂದರು. ಇದಕ್ಕೆ ಮರು ಪ್ರತಿಕ್ರಿಯಿಸಿದ ಮಹಿಳಾ ಅಧಿಕಾರಿ ಮೇಲಾಧಿಕಾರಿಯ ಗಮನಕ್ಕೆ ತಂದು ದೂರು ಕೊಡುವ ಬಗ್ಗೆ ವಿಚಾರಿಸುವೆ ಎಂದರು.
ಜಿಲ್ಲೆಯಲ್ಲಿ ಕೆಲ ಕಡೆಗಳಲ್ಲಿ ಇನ್ನೂ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ರಾಯಬಾಗ ವ್ಯಕ್ತಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಎಸ್ಪಿ ಅವರು ಕಳೆದ ಬಾರಿ ಫೋನ್ ಇನ್ ಕಾರ್ಯಕ್ರಮದಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುವವರ ವಿರುದ್ಧ ಬಿಸಿ ಮುಟ್ಟಿಸಲಾಗಿದೆ. ಅಲ್ಲದೆ ಕೆಲ ಅಕ್ರಮ ಬಾರ್ ಗಳನ್ನು ಬಂದ್ ಮಾಡಲಾಗಿದೆ. ಇಷ್ಟಾಗಿ ಮತ್ತೆ ನಡೆಸುತ್ತಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ರಾಮದುರ್ಗ ತಾಲೂಕಿನ ನಾಗನೂರು ಗ್ರಾಮದ ವೃದ್ದೆಗೆ ಸೊಸೆ ಹಾಗೂ ಮಗ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ. ಮನೆಯನ್ನು ಮಗನ ಹೆಸರಿಗೆ ಮಾಡುವಂತೆ ಕಾಡಿಸುತ್ತಿದ್ದಾರೆ ಎಂದು ಫೋನ್ ಮೂಲಕ ಮಹಿಳೆ ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಡಾ. ಸಂಜೀವ ಪಾಟೀಲ ಅವರು, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರು ಕ್ರಮ ಜರುಗಿಸುತ್ತಾರೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಡಿವೈಎಸ್ಪಿ ವೀರೇಶ ದೊಡಮನಿ, ಸಿಪಿಐ ಬಿ.ಆರ್.ಗಡ್ಡೇಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
https://pragati.taskdun.com/belagavi-sp-phone-in-on-26th-find-a-solution-to-the-problem-from-sitting/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ