*ಬೆಳಗಾಂ ಶುಗರ್ಸ್ 11, ಪೆಟ್ರೋಲ್ ಪಂಪ್ 3 ತಿಂಗಳಲ್ಲೇ ನಿರ್ಮಿಸಿದ್ದು ವಿಶ್ವ, ದೇಶದಲ್ಲೇ ದಾಖಲೆ: ಸಚಿವ ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ: ಬೆಳಗಾಂ ಶುಗರ್ಸ್ ಸಕ್ಕರೆ ಕಾರ್ಖಾನೆಯನ್ನು 11 ತಿಂಗಳಲ್ಲಿ ನಿರ್ಮಿಸಿದ್ದು ವಿಶ್ವದಲ್ಲೇ ದಾಖಲೆ. ಈಗ ಬಿ.ಪಿ.ಸಿ.ಎಲ್ ಪೆಟ್ರೋಲ್ ಪಂಪ ಮಳಿಗೆಯನ್ನು ಕೇವಲ 3 ತಿಂಗಳಲ್ಲೇ ನಿರ್ಮಿಸಿ ದೇಶದಲ್ಲೇ ದಾಖಲೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಯಮಕನಮರಡಿ ಮತಕ್ಷೇತ್ರದ ಹುದಲಿ ಸಮೀಪ ಬೆಳಗಾಂ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನ ನೂತನವಾಗಿ ನಿರ್ಮಿಸಿದ ಪೆಟ್ರೋಲ್ ಪಂಪ್ ಮಳಿಗೆ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ನಾವು ಸಕ್ಕರೆ ಕಾರ್ಖಾನೆ, ಪೆಟ್ರೋಲ್ ಪಂಪ್ ನಿರ್ಮಿಸಿ ಎಷ್ಟು ದುಡ್ಡು ಗಳಿಸುತ್ತೇವೆ ಎಂಬುವುದು ಪ್ರಮುಖವಲ್ಲ. ಆದರೆ ಎಷ್ಟು ಜನಕ್ಕೆ ಸ್ಥಳೀಯವಾಗಿ ಉದ್ಯೋಗ ನೀಡುತ್ತಿದ್ದೇವೆ ಎಂಬುವುದು ಪ್ರಮುಖವಾಗುತ್ತದೆ ಎಂದರು.
ಸಕ್ಕರೆ ಕಾರ್ಖಾನೆ ನಿರ್ಮಿಸಿ ಸಾವಿರಾರು ಸ್ಥಳೀಯರಿಗೆ ಉದ್ಯೋಗ ನೀಡಿದ್ದೇವೆ. ಈಗ ಹುದಲಿಯಲ್ಲಿ ನಿರ್ಮಿಸಿರುವ ಪೆಟ್ರೋಲ್ ಪಂಪ್ ಮಳಿಗೆಯಿಂದ ಕನಿಷ್ಟ 20ರಿಂದ 25 ಜನಕ್ಕೆ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ಈ ನೂತನ ಬಿ.ಪಿ.ಸಿ.ಎಲ್ ಪೆಟ್ರೋಲ್ ಪಂಪ ಮಳಿಗೆಯಲ್ಲಿ ಡಿಸೇಲ್, ಪೆಟ್ರೋಲ್, ಸಿ.ಎನ್. ಜಿ, ಇ.ವಿ. ಚಾರ್ಜಿಂಗ್ ಪಾಯಿಂಟ್, ಲೂಬ್ರಿಕೆಂಟ್ಸ್ ಸೇವೆಗಳನ್ನು ಒಳಗೊಂಡಿದ್ದು, ಈ ಭಾಗದ ಜನ ಪೆಟ್ರೋಲ್ ಪಂಪ ಮಳಿಗೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಬೆಳಗಾಂ ಶುಗರ್ಸ್ ಕಾರ್ಖಾನೆಗೆ ಸ್ಥಳದ ಅಭಾವ ಇದ್ದು, ಕಾರ್ಖಾನೆಗೆ ಭೂಮಿ ನೀಡಿರುವ ರೈತರಗೆ ನಾವು ಪರ್ಯಾಯವಾಗಿ ಬೇರೆ ಸ್ಥಳಗಳಲ್ಲಿ ಭೂಮಿ ನೀಡಿ, ಅವರಿಗೆ ನೀರಾವರಿ ಸೌಲಭ್ಯ ನೀಡಿದ್ದೇವೆಂದು ತಿಳಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿ 9 ತಿಂಗಳಲ್ಲೇ ಬೆಳಗಾವಿ ಜಿಲ್ಲೆಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದೇನೆ. ಇನ್ನು ಹುದಲಿಯಿಂದ ಬೆಳಗಾವಿ ವರೆಗೆ ಅಧಿಕಾರ ಇಲ್ಲದೇ ಇರುವಾಗ ರಸ್ತೆಯನ್ನು ಅಭಿವೃದ್ಧಿ ಪಡಿಸಿ, ಒಂದು ಗಂಟೆ ಸಂಚರಿಸುವ ಸಮಯವನ್ನು 30 ನಿಮಿಷಕ್ಕೆ ಕಡಿತಗೊಳಿಸಿದ್ದೇನೆ. ನಾನೇ ಲೋಕೋಪಯೋಗಿ ಸಚಿವನಾಗಿದ್ದರಿಂದ ಮುಂದಿನ ದಿನಗಳಲ್ಲಿ ಗೋಕಾಕ -ಬೆಳಗಾವಿ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಈಗಾಗಲೇ ರೂಪರೇಷ ಸಿದ್ದಪಡಿಸಿದ್ದು, ಹುದಲಿ ಬಳಿ ಇರುವ ರೈಲು ಹಳಿಗೆ ಮೇಲ್ಸೆತುವೆ ನಿರ್ಮಿಸಲು 35 ಕೋಟಿ ರೂ. ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಬಿ.ಪಿ.ಸಿ.ಎಲ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಸತೀಶ್ ಶುಗರ್ಸ ಲಿ. ಮತ್ತು ಬೆಳಗಾಂ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನ ಚೇರ್ಮನ್, ಸಿ.ಎಪ್.ಓ ಪ್ರದೀಪಕುಮಾರ ಎಂ. ಇಂಡಿ ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸತ್ಕರಿಸಿದರು. ಪೆಟ್ರೋಲ್ ಪಂಪ್ ಮಳಿಗೆ ನಿರ್ಮಾಣಕ್ಕೆ ಸ್ಥಳ ನೀಡಿದ ರೈತರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಬಿ.ಪಿ.ಸಿ.ಎಲ್ ನ ದಕ್ಷಿಣ ವಲಯದ ರಿಟೇಲ್ ಮುಖ್ಯಸ್ಥ ರವಿ ಸಹಾಯ್, ಕರ್ನಾಟಕ ರಾಜ್ಯ ರಿಟೇಲ್ ಮುಖ್ಯಸ್ಥ ಅನೂಪ ತನೇಜಾ, ಬೆಳಗಾವಿ ಜಿಲ್ಲೆಯ ಟೆರಿಟರಿ ರಿಟೇಲ್ ಮ್ಯಾನೇಜ ಸುರೇಶ ಅಲಾಟೆ, ಬೆಳಗಾವಿ ಜಿಲ್ಲೆಯ ಟೆರಿಟರಿ ರಿಟೇಲ್ ನ ಕೋ-ಆರ್ಡಿನೇಟರ್ ಕೆ. ಸಾಯಿವೀರ ರೆಡ್ಡಿ, ಬೆಳಗಾವಿ ಬಿ.ಪಿ.ಸಿ.ಎಲ್ ಸೇಲ್ಸ ಆಪೀಸರ್ ವೈಭವ ಬಿಶಾಲ್, ಬಿ.ಪಿ.ಸಿ.ಎಲ್ ಇಂಜಿನಿಯರ್ ಅನುಕೃತಿ ದಾಸ, ಸತೀಶ್ ಶುಗರ್ಸ ಲಿ. ಮತ್ತು ಬೆಳಗಾಂ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನ ಚೇರ್ಮನ್, ಸಿ.ಎಪ್.ಓ ಪ್ರದೀಪಕುಮಾರ ಎಂ. ಇಂಡಿ, ಬೆಳಗಾವಿ ಮೇಘಾ ಗ್ಯಾಸ್ ಮುಖ್ಯಸ್ಥ ಸುಶಾಂತ ಜೀವನಗೌಡರ್, ಬೆಳಗಾಂ ಶುಗರ್ಸ್ ನ ಹಿರಿಯ ಉಪಾಧ್ಯಕ್ಷ ಎಲ್. ಆರ್.ಕಾರಗಿ, ಸತೀಶ ಶುಗರ್ಸ್ ನ ಹಿರಿಯ ಉಪಾಧ್ಯಕ್ಷ ಪಿ.ಡಿ. ಹಿರೇಮಠ, ಬೆಳಗಾಂ ಶುಗರ್ಸ್ ಉಪಾಧ್ಯಕ್ಷ ಎ. ಎಸ್. ರಾಣಾ, ಸತೀಶ ಶುಗರ್ಸ್ ಉಪಾಧ್ಯಕ್ಷರಾದ ಆರ್. ಪವಾರ, ವಿ.ಎಮ್. ತಳವಾರ ಸೇರಿದಂತೆ ಬಿ.ಪಿ.ಸಿ.ಎಲ್ , ಬೆಳಗಾಂ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ