Belagavi NewsBelgaum NewsKannada NewsKarnataka NewsPolitics

*ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಆರಂಭ: ಸಚಿವ ಸತೀಶ್‌ ಜಾರಕಿಹೊಳಿ *

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿಗಳ ನೇಮಕ ಹಾಗೂ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಬೆಂಗಳೂರಿನ ವಿಕಾಸಸೌಧದಲ್ಲಿ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಅವರೊಂದಿಗೆ ಜಂಟಿಯಾಗಿ ಹಮ್ಮಿಕೊಂಡಿದ್ದ ಬೆಳಗಾವಿ ವೈದ್ಯಕೀಯ ‌ವಿಜ್ಞಾನ ಸಂಸ್ಥೆಯ (ಬಿಮ್ಸ್) ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬಿಮ್ಸ್ ಆವರಣದಲ್ಲಿ 188 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ವರ್ಷಕ್ಕೆ 38 ಕೋಟಿ ರೂಪಾಯಿ ಅನುದಾನ ಅವಶ್ಯಕತೆ ಇದ್ದು, ಸಿಎಂ ಸಿದ್ದರಾಮಯ್ಯನವರಿಂದ ಅನುಮೋದನೆ ಪಡೆಯಲಾಗುವುದು ಎಂದ ಅವರು, ಈ ಆಸ್ಪತ್ರೆಗೆ ಅಗತ್ಯ ಇರುವ ಎ-ವೃಂದ, ಬಿ-ವೃಂದದ 570 ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನರವಿಜ್ಞಾನ, ನರಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಅಂತಃಸ್ರಾವಶಾಸ್ತ್ರ, ಗ್ಯಾಸ್ಟ್ರೋಎಂಟರಾಲಜಿ, ನೆಫ್ರಾಲಜಿ ಮತ್ತು ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಸೇರಿದಂತೆ ಇನ್ನಿತರ ಆರೋಗ್ಯ ಸೇವೆ ನೀಡಲು ತಜ್ಞ ವೈದ್ಯರ ಸೌಲಭ್ಯಗಳು ದೊರಕಲಿದ್ದು, ಈ ನೂತನ ಆಸ್ಪತ್ರೆಯಿಂದ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದರು.

ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಅವರೊಂದಿಗೆ ಚರ್ಚಿಸಿ ಬಿಮ್ಸ್ ಆವರಣದಲ್ಲಿ ನರ್ಸಿಂಗ್‌ ಹಾಸ್ಟೆಲ್‌, 450 ಹಾಸಿಗೆಯುಳ್ಳ ಬೋಧನಾ ಆಸ್ಪತ್ರೆ ಕಟ್ಟಡ ನಿರ್ಮಾಣ ಚರ್ಚೆ ನಡೆಸಿರುವುದಾಗಿ ತಿಳಿಸಿದ ಸಚಿವ ಸತೀಶ್‌ ಜಾರಕಿಹೊಳಿ ಅವರು, ಇದೇ ವೇಳೆ ಬೆಳಗಾವಿಯ ಬಿಮ್ಸ್ ಅಭಿವೃದ್ಧಿಗೆ ವೇಗ ನೀಡುವ ಮೂಲಕ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಬಿಮ್ಸ್ ನಿರ್ದೇಶಕ ಅಶೋಕ ಕುಮಾರ ಶೆಟ್ಟಿ ಹಾಗೂ ಮುಖ್ಯ ಆಡಳಿತ ಅಧಿಕಾರಿಗಳು ಡಾ. ಸಿದ್ದು ಹುಲ್ಲೋಳಿ ಸೇರಿದಂತೆ ವೈದ್ಯಕೀಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button