Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಆನೆಗಳ ಸಾವು*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಆನೆಗಳು ಸಾವನ್ನಪ್ಪಿರುವ ಘಟನೆ ಖಾನಾಪುರ ತಾಲ್ಲೂಕಿನ ಸುಳೇಗಾಳಿ ಗ್ರಾಮದಲ್ಲಿ ಸಂಭವಿಸಿದೆ.

ದೇವರಾಯಿ ಗ್ರಾಮದ ಸಮೀಪದ ಸುಳೇಗಾಳಿ ಪ್ರದೇಶದ ರೈತ ಗಣಪತಿ ಸಾತೇರಿ ಗುರುವ್ ಹಾಗೂ ಇತರ ರೈತರು ತಮ್ಮ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುವ ಶಾಕ್‌ ಕರೆಂಟ್ ಯಂತ್ರಗಳನ್ನು ಅಳವಡಿಸಿದ್ದರು. ಇಂತಹ ಯಂತ್ರಗಳನ್ನು ತಾಲ್ಲೂಕಿನ ಹಲವಾರು ರೈತರು ಬಳಸುತ್ತಿದ್ದಾರೆ. 

ಆದರೆ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಗದ್ದೆಯಿಂದ ಹಾದುಹೋಗುವ ವಿದ್ಯುತ್ ತಂತಿ ತುಂಡಾಗಿ ಕೆಲ ದಿನಗಳಿಂದ ಅದೇ ಸ್ಥಿತಿಯಲ್ಲಿ ಬಿದ್ದಿತ್ತು. ಹೆಸ್ಕಾಂ ಅಧಿಕಾರಿಗಳು ಇದನ್ನು ಲೆಕ್ಕಿಸದೆ ಇದ್ದರು. ನಿನ್ನೆ ಮತ್ತೊಂದು ತಂತಿ ಮುರಿದು ಬಿದ್ದಿದ್ದು, ಅದು ರೈತರು ಅಳವಡಿಸಿದ್ದ ಯಂತ್ರದ ತಂತಿಗೆ ತಾಗಿಕೊಂಡಿತು. ಇದರ ಪರಿಣಾಮವಾಗಿ ಆ ತಂತಿಯಲ್ಲಿ ನೇರವಾಗಿ ವಿದ್ಯುತ್ ಪ್ರವಾಹ ಹರಿಯತೊಡಗಿತು. ಇದೇ ವೇಳೆ ಆಹಾರಕ್ಕಾಗಿ ಆ ಪ್ರದೇಶಕ್ಕೆ ಬಂದ ಎರಡು ಕಾಡನೆಗಳು ಆ ತಂತಿಗೆ ಸ್ಪರ್ಶವಾದ ಕ್ಷಣದಲ್ಲೇ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿವೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

Home add -Advt

ವಿವರ ವರದಿ –

ವಿದ್ಯುತ್ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವು: ನಾಗರಗಾಳಿ ಅರಣ್ಯದ ದೇವರಾಯಿ ಗ್ರಾಮದ ಬಳಿ ಘಟನೆ

ಖಾನಾಪುರ: ಕೃಷಿ ಜಮೀನಿನಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿಯಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ನಾಗರಗಾಳಿ ಅರಣ್ಯ ವ್ಯಾಪ್ತಿಯ ದೇವರಾಯಿ ಗ್ರಾಮದ ಬಳಿ ಭಾನುವಾರ ಸಂಭವಿಸಿದೆ.

ಈ ಘಟನೆಯಲ್ಲಿ ಕಳೆದ ಹಲವು ದಿನಗಳ ಹಿಂದೆ ನೆರೆಯ ದಾಂಡೇಲಿ ಕಾಡಿನಿಂದ ಆಹಾರ ಅರಸಿ ತಾಲ್ಲೂಕಿಗೆ ಬಂದಿದ್ದ 20-22 ವಯಸ್ಸಿನ ಮತ್ತು 40-45 ವಯಸ್ಸಿನ ತಲಾ ಒಂದು ಗಂಡಾನೆಗಳು ಅಸುನೀಗಿವೆ. ಘಟನೆಗೆ ಸಂಬಂಧಿಸಿದಂತೆ ಆನೆಗಳ ಕಳೇಬರ ಪತ್ತೆಯಾದ ಜಮೀನಿನ ಮಾಲೀಕರಾದ ಸುಳ್ಳೇಗಾಳಿ ಗ್ರಾಮದ ರೈತ ಗಣಪತಿ ಗುರವ ಸೇರಿದಂತೆ ಹೆಸ್ಕಾಂ ಇಲಾಖೆಯ ವಿರುದ್ಧ ನಾಗರಗಾಳಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಲ್ಲೂಕಿನ ನಾಗರಗಾಳಿ ಅರಣ್ಯ ವಲಯದ ಕರ್ಜಗಿ, ಮೇರಡಾ, ಜಾಂಬೇಗಾಳಿ, ಸುಳ್ಳೇಗಾಳಿ, ಗೋಟಗಾಳಿ, ಜಟಗೆ, ದೇವರಾಯಿ ಭಾಗದಲ್ಲಿ ಕಳೆದ ಒಂದು ವಾರದಿಂದ ಎರಡು ಕಾಡಾನೆಗಳು ಸಂಚರಿಸುತ್ತಿದ್ದವು. ಈ ಗ್ರಾಮಗಳು ನಾಗರಗಾಳಿ ಅರಣ್ಯಕ್ಕೆ ಹೊಂದಿಕೊಂಡಿದ್ದು, ಹಗಲು ಹೊತ್ತಿನಲ್ಲಿ ಅರಣ್ಯದಲ್ಲಿ ಮರೆಯಾಗುತ್ತಿದ್ದ ಆನೆಗಳು ಕತ್ತಲಾಗುತ್ತಲೇ ರೈತರ ಹೊಲಗಳಿಗೆ ತೆರಳಿ ಕಬ್ಬು=ಭತ್ತದ ಬೆಳೆಗಳನ್ನು ತಿಂದು-ತುಳಿದು ಹಾಳುಮಾಡುತ್ತಿದ್ದವು.

ಆನೆಗಳಿಂದ ಬೆಳೆ ರಕ್ಷಣೆಗಾಗಿ ಕೆಲ ರೈತರು ತಮ್ಮ ಜಮೀನುಗಳಿಗೆ ಸೋಲಾರ್ ತಂತಿಬೇಲಿಗಳನ್ನು ಅಳವಡಿಸಿಕೊಂಡಿದ್ದರು. ಅದೇ ರೀತಿ ಸುಳ್ಳೇಗಾಳಿಯ ರೈತ ಗಣಪತಿ ಗುರವ ಅವರು ತಮ್ಮ ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ತುಳಿದು ಆನೆಗಳು ಮೃತಪಟ್ಟಿವೆ ಎಂದು ಪ್ರಾಥಮಿಕ ಮೂಲಗಳು ಸ್ಪಷ್ಟಪಡಿಸಿವೆ.

ದೇವರಾಯಿ ಹಾಗೂ ಸುಳ್ಳೇಗಾಳಿ ವ್ಯಾಪ್ತಿಯ ಕೃಷಿ ಜಮೀನುಗಳಿಗೆ ಕಳೆದ ಎರಡು ದಿನಗಳಿಂದ ಎರಡು ಮಧ್ಯವಯಸ್ಕ ಕಾಡಾನೆಗಳು ಕಾಣಿಸಿಕೊಂಡಿದ್ದವು. ಇವೇ ಆನೆಗಳು ಭಾನುವಾರ ವಿದ್ಯುತ್ ಪ್ರವಹಿಸಿದ್ದರಿಂದ ಮೃತಪಟ್ಟಿವೆ ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸುಳ್ಳೇಗಾಳಿಯ ರೈತ ಗಣಪತಿ ಗುರವ ಅವರ ಜಮೀನಿನ ಬಳಿ ರವಿವಾರ ಮಧ್ಯಾಹ್ನ ಎರಡು ಕಾಡಾನೆಗಳ ಕಳೇಬರ ಪತ್ತೆಯಾಗಿವೆ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದು, ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ತುಳಿದ ಕಾಡಾನೆಗಳು ಸ್ಥಳದಲ್ಲೇ ಮೃತಪಟ್ಟಿವೆ.

ಹೆಸ್ಕಾಂ ನಿರ್ಲಕ್ಷ್ಯದಿಂದ ಹೈ ಟೆನ್ಶನ್ ವಿದ್ಯುತ್ ತಂತಿ ತುಂಡರಿಸಿ ಬಿದ್ದಿದ್ದರಿಂದ ಈ ತಂತಿ ತುಳಿದು ಆನೆಗಳು ಸಾವನ್ನಪ್ಪಿವೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿವೆ. ಮೃತ ಆನೆಗಳ ಕಳೇಬರಗಳ ಮರಣೋತ್ತರ ಪರೀಕ್ಷೆಯ ಬಳಿಕ ಇಲಾಖೆಯ ನಿಯಮಗಳ ಪ್ರಕಾರ ಅವುಗಳ ಅಂತ್ಯಕ್ರಿಯೆ ಮಾಡಲಾಗುತ್ತದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಬೆಳೆ ಸಂರಕ್ಷಣೆಯ ನೆಪದಲ್ಲಿ ಎರಡು ಆನೆಗಳ ಸಾವಿಗೆ ಕಾರಣರಾದವರ ವಿರುದ್ಧ ಅರಣ್ಯ ಇಲಾಖೆ ಅಗತ್ಯ ಕ್ರಮವನ್ನು ಕೈಗೊಳ್ಳಲಿದೆ. ಭವಿಷ್ಯದಲ್ಲಿ ಕಾಡಾನೆಗಳ ಜೀವ ರಕ್ಷಣೆಗಾಗಿ ಇಲಾಖೆಯಿಂದ ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಮಗದುಮ್ ಮಾಹಿತಿ ನೀಡಿದ್ದಾರೆ.

ಸುಳ್ಳೇಗಾಳಿ ಮತ್ತು ದೇವರಾಯಿ ಭಾಗದ ರೈತರು ಆನೆಗಳು ಸೇರಿದಂತೆ ವನ್ಯಮೃಗಗಳ ದಾಳಿಯಿಂದ ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು ಹಾಗೂ ಭತ್ತದ ಬೆಳೆಗಳನ್ನು ರಕ್ಷಣೆ ಮಾಡುವ ಸಲುವಾಗಿ ಸೋಲಾರ್ ತಂತಿಬೇಲಿಗಳನ್ನು ಅಳವಡಿಸಿದ್ದು, ಈ ತಂತಿಬೇಲಿಗಳಿಗೆ ಹೆಚ್ಚಿನ ವೋಲ್ಟೇಜ್ ವಿದ್ಯುತ್ ತಂತಿಗಳನ್ನು ಹರಿಬಿಟ್ಟಿದ್ದರು. ಈ ತಂತಿಬೇಲಿ ಸ್ಪರ್ಶಿಸಿ ಎರಡು ಆನೆಗಳು ಸಾವನ್ನಪ್ಪಿವೆ.
-ರಣಜೀತ ಪಾಟೀಲ, ಸ್ಥಳೀಯರು.

ಖಾನಾಪುರ ತಾಲ್ಲೂಕಿನ ಕಾನನದಂಚಿನ ಕೃಷಿ ಜಮೀನುಗಳ ಬಳಿ ಕಾಡಾನೆಗಳು ಬಂದುಹೋಗುವ ಪರಿಪಾಠ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಇದುವರೆಗೂ ತಾಲ್ಲೂಕಿನಲ್ಲಿ ಸಂಚರಿಸುವ ಕಾಡಾನೆಗಳಿಗೆ ಯಾವುದೇ ಜೀವಭಯ ಇರಲಿಲ್ಲ. ಈಗ ಬೆಳೆ ರಕ್ಷಣೆಯ ಭರದಲ್ಲಿ ರೈತರು ಹೆಣೆದ ಜಾಲಕ್ಕೆ ಸಿಕ್ಕ ಎರಡು ಆನೆಗಳು ತಮ್ಮ ಜೀವ ತ್ಯಜಿಸಿದ ಘಟನೆ ಖೇದಕರವಾದದ್ದು. ಅರಣ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಕೃಷಿ ಜಮೀನುಗಳಲ್ಲಿ ಅಕ್ರಮವಾಗಿ ಎಳೆದಿರುವ ತಂತಿಗಳನ್ನು ಪತ್ತೆ ಹಚ್ಚಿ ತೆರವುಗೊಳಿಸಬೇಕೆಂದು ಹೆಸ್ಕಾಂ ಇಲಾಖೆಗೆ ಪತ್ರ ಬರೆಯಲಾಗುತ್ತದೆ. ಜೊತೆಗೆ ಇಲಾಖೆಯಿಂದಲೇ ಕಾಡಂಚಿನ ಭಾಗದ ರೈತರು ಅಕ್ರಮವಾಗಿ ತಮ್ಮ ಕೃಷಿ ಜಮೀನುಗಳಲ್ಲಿ ಅಳವಡಿಸಿರುವ ವಿದ್ಯುತ್ ತಂತಿಬೇಲಿಗಳ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತದೆ. ಭಾನುವಾರ ಸಂಭವಿಸಿದ ಕಾಡಾನೆಗಳ ಸಾವಿಗೆ ಹೆಸ್ಕಾಂ ಹಾಗೂ ರೈತರು ಇಬ್ಬರನ್ನೂ ಹೊಣೆಗಾರನ್ನಾಗಿಸಿದೆ.
-ಶಿವಾನಂದ ಮಗದುಮ್, ಎಸಿಎಫ್, ನಾಗರಗಾಳಿ.

Related Articles

Back to top button