ಸಂಪೂರ್ಣ ಮಾಹಿತಿ ಇಲ್ಲಿದೆ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಧಿವೇಶನ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಹೇಗಿದೆ ಭದ್ರತಾ ವ್ಯವಸ್ಥೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಡಿಸೆಂಬರ್ 9ರಿಂದ 20ರವರೆಗೆ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟೀನ್ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಧಿವೇಶನ ಹಿನ್ನೆಲೆಯಲ್ಲಿ ಭದ್ರತೆಗಾಗಿ 6000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 6 ಎಸ್ ಪಿಗಳು, 10 ಹೆಚ್ಚುವರಿ ಎಸ್ ಪಿಗಳು, 38 ಡಿವೈ ಎಸ್ ಪಿಗಳು, 100 ಪೊಲೀಸ್ ಇನ್ಸ್ ಪೆಕ್ಟರ್ ಗಳು, 235 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ಅಧಿವೇಶನ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.
30 ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ. 80ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ.ಪ್ರತಿಭಟನೆಗಳು ನಡೆಯುವ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಬೆಳಗಾವಿ ನಗರ, ಟ್ರಾಫಿಕ್ ಬಂದೋಬಸ್ತ್ ಸೇರಿ 20 ವಲಯಗಳನ್ನು ರಚಿಸಲಾಗಿದೆ. ಪ್ರತಿ ವಲಯಕ್ಕೂ ಓರ್ವ ಮೇಲ್ವಿಚಾರಕ ವೀಕ್ಷಕರನ್ನು ನೇಮಿಸಲಾಗಿದೆ. ಮುಖ್ಯ ವಲಯದಲ್ಲಿ ಓರ್ವ ಎಸ್ ಪಿ ರ್ಯಾಂಕ್ ಅಧಿಕಾರಿ ಇರುತ್ತಾರೆ. ಸುವರ್ಣ ವಿಧಾನಸೌಧ ವಲಯದಲ್ಲಿ ಒಬ್ಬರು ಎಸ್ ಪಿ, ಡಿಎಸ್ ಪಿ ಸೇರಿ ಮತ್ತಿತರ ಅಧಿಕಾರಿಗಳು ಇರಲಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು 35 ಕೆ ಎಸ್ ಆರ್ ಪಿ ತುಕಡಿಗಳು, 10 ಡಿಆರ್ ಸಿಆರ್, 8 ಕ್ಯುಆರ್ ಟೀಂ, 16 ಎಸಿ ಟೀಂ ಮಂಜೂರಾಗಿದೆ. ಬೆಂಗಳೂರಿನಿಂದ 1 ಗರುಡ ವಿಶೇಷ ಕಮಂಡೋ ಪಡೆ ಆಗಮಿಸಲಿದೆ. 300 ಬಾಡಿಇ ವಾರ್ನ್ ಕ್ಯಾಮರಾ ತರಿಸಲಾಗುತ್ತಿದೆ. ಏನೆಲ್ಲಾ ನಡೆಯಲಿದೆ ಎಂಬುದನ್ನು ಈ ಕ್ಯಾಮರಾ ತನ್ನಿಂದ ತಾನೇ ರೆಕಾರ್ಡ್ ಮಾಡುತ್ತದೆ.
ಅಧಿವೇಶನದ ವೇಳೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಾಗಿ 55 ಅರ್ಜಿಗಳು, 5 ಮನವಿ ಸಲ್ಲಿಸುವ ಬಗ್ಗೆ ಅರ್ಜಿಗಳು ಬಂದಿವೆ. ನಿಗದಿತ ಸ್ಥಳಗಳಲ್ಲಿ ಮಾತ್ರ ಪ್ರತಿಭಟನೆಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ