*ಭಾರಿ ಮಳೆ: ಬೆಳಗಾವಿಯಲ್ಲಿ 22 ಸೇತುವೆಗಳು ಮುಳುಗಡೆ; 44ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, 7 ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಪ್ರವಾಹ ಭೀತಿ ಶುರುವಾಗಿದೆ.
ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಕೃಷ್ಣಾ, ಪಂಚಗಂಗಾ, ಹಿರಣ್ಯಕೇಶಿ, ಮಾರ್ಕಾಂಡೇಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ರಸ್ತೆ, ಸೇತುವೆಗಳು ಜಲಾವೃತಗೊಂಡಿವೆ. ಚಿಕ್ಕೋಡಿ, ನಿಪ್ಪಾಣಿ, ಮೂಡಲಗಿ, ಗೋಕಾಕ್, ಹುಕ್ಕೇರಿ ಸೇರಿದಂತೆ ಒಟ್ಟು 22 ಸೇತುವೆಗಳು ಮುಳುಗಡೆಯಾಗಿವೆ.
ಇದರಿಂದಾಗಿ 44 ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿವೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಪರದಾಡುವಂತಾಗಿದೆ. ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಕಬ್ಬಿನ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. 160 ಮನೆಗಳು ಕುಸಿತಗೊಂಡಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಬಸವನ ಕುಡುಚಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಕೆ ಎಲ್ ಇ ವೆಲ್ ನೆಸ್ ಸೆಂಟರ್ ಗೆ ನೀರು ನುಗ್ಗಿದೆ. ಕೃಷ್ಣಾ ನದಿ ಪ್ರವಾಹಕ್ಕೆ ನಿಪ್ಪಾಣಿಯ ಹುಣ್ಣರಗಿ ಗ್ರಾಮದಲ್ಲಿ ಲಕ್ಷ್ಮೀನಾರಾಯಣ ದೇವಾಲಯ ಜಲಾವೃತಗೊಂಡಿದೆ. ಚಿಕ್ಕೋಡಿಯಲ್ಲಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಮುಳುಗಡೆಯಾಗಿದೆ. ವಂಟಮುರಿಯಲ್ಲಿ ಸಾವಿರಾರು ಎಕರೆ ಬೆಳೆಗಳು ನೀರುಪಾಲಾಗಿವೆ. ವರುಣಾರ್ಭಟಕ್ಕೆ ಬೆಳಗಾವಿ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ