ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಸಂಗ್ರಹಿತ ಮಾದರಿಗಳ ತ್ವರಿತ ಮತ್ತು ಗುಣಮಟ್ಟದ ಪರೀಕ್ಷೆ, ಸೋಂಕಿನ ಲಕ್ಷಣ ಹೊಂದಿದವರು ಮತ್ತು ಸೋಂಕಿತರ ಸಂಪರ್ಕಿತರ ಪತ್ತೆಗೆ ಪರಿಣಾಮಕಾರಿ ವಿಧಾನ ಅಳವಡಿಕೆ, ಸಕಾಲಕ್ಕೆ ಸಮರ್ಪಕ ಚಿಕಿತ್ಸೆ ಒದಗಿಸುವುದು ಮತ್ತು ಸಾರ್ವಜನಿಕರ ದೂರು ನಿರ್ವಹಣೆ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ.
ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಏ.24) ಸಂಜೆ ಸುಮಾರು ಆರು ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಸಮರ್ಪಕ ಚಿಕಿತ್ಸೆಯ ಮಾರ್ಗೋಪಾಯಗಳ ಕುರಿತು ಚರ್ಚೆ ನಡೆಸಲಾಯಿತು.
ಬಿಮ್ಸ್ ಹಾಗೂ ಎನ್.ಐ.ಟಿ.ಎಂ. ಪ್ರಯೋಗಾಲಯಗಳಲ್ಲಿ ನಿರಂತರವಾಗಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ತ್ವರಿತವಾಗಿ ಹಾಗೂ ಗುಣಮಟ್ಟದ ಪರೀಕ್ಷೆಯ ಬಗ್ಗೆಯೂ ಆದ್ಯತೆ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.
ಸೋಂಕಿತರ ಸಂಪರ್ಕಿತರನ್ನು ತಕ್ಷಣವೇ ಗುರುತಿಸಿ ಅವರ ಮಾದರಿಯನ್ನು ಸಂಗ್ರಹಿಸುವುದಲ್ಲದೇ ಅದನ್ನು ತ್ವರಿತವಾಗಿ ಪರೀಕ್ಷಿಸಿ ವರದಿ ನೀಡಬೇಕು. ಅದೇ ರೀತಿ ಬೇರೆ ಕಡೆಯಿಂದ ಬಂದು ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ವಾಸ ಮಾಡುತ್ತಿರುವವರನ್ನು ಕೂಡ ಪರೀಕ್ಷಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಖಾಸಗಿ ಆಸ್ಪತ್ರೆಗಳ ಬೆಡ್ ಹಂಚಿಕೆಗೆ ತಂತ್ರಾಂಶ:
ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್ ಹಾಗೂ ವೈದ್ಯಕೀಯ ಸೌಲಭ್ಯಗಳ ಮಾಹಿತಿಯನ್ನು ಸಂಗ್ರಹಿಸಿ ತುರ್ತು ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಅಲ್ಲಿನ ಬೆಡ್ ಗಳನ್ನು ಬಳಸಿಕೊಳ್ಳುವ ಕುರಿತು ಚರ್ಚೆ ನಡೆಸಲಾಯಿತು.
ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿರುವ ಬೆಡ್(ಹಾಸಿಗೆ)ಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಪ್ರತ್ಯೇಕ ತಂತ್ರಾಂಶದಲ್ಲಿ ಅಳವಡಿಸಿ ಸೋಂಕಿತರ ಅಗತ್ಯಕ್ಕೆ ಅನುಸಾರವಾಗಿ ಬೆಡ್ ಮಂಜೂರು ಮಾಡಬೇಕು. ಈ ರೀತಿ ಬೆಡ್ ಹಂಚಿಕೆಯನ್ನು ಪಾರದರ್ಶಕವಾಗಿ ನಿರ್ವಹಿಸಲು ಜಿಲ್ಲಾ ಪಂಚಾಯತ ಸಿಇಓ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲೆಯ ಗಡಿಯಲ್ಲಿ ತೀವ್ರ ನಿಗಾ:
ಕಾಲಕಾಲಕ್ಕೆ ಸರಕಾರ ಪ್ರಕಟಿಸುವ ಮಾರ್ಗಸೂಚಿಯ ಪ್ರಕಾರ ಗಡಿಯಲ್ಲಿ ತೀವ್ರ ನಿಗಾ ವಹಿಸಬೇಕು. ಗಡಿಯಲ್ಲಿ ಸಂಚರಿಸುವ ವಾಹನಗಳ ತಪಾಸಣೆ ಮತ್ತು ತಪಾಸಣಾ ಪ್ರಕ್ರಿಯೆಗಳ ಮೇಲೆ ಹಿರಿಯ ಅಧಿಕಾರಿಗಳು ನಿಗಾವಹಿಸಲು ಅನುಕೂಲವಾಗುವಂತೆ ಗಡಿ ಚೆಕ್ ಪೋಸ್ಟ್ ಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸಿ ತಂತ್ರಾಂಶದ ಮೂಲಕ ಪರಿಶೀಲಿಸಲು ಪ್ರಾದೇಶಿಕ ಆಯುಕ್ತ ಆಮ್ಲಾನ್ ಬಿಸ್ವಾಸ್ ತಿಳಿಸಿದರು.
ಇದೇ ರೀತಿ ಕ್ಯಾಬ್(ಕೋವಿಡ್ ಅಪ್ರೋಪ್ರಿಯೇಟ್ ಬಿಹೇವಿಯರ್) ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆಯ ವತಿಯಿಂದ ಇನ್ನಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳುವುದರ ಜತೆಗೆ ಸರಕಾರದ ಮಾರ್ಗಸೂಚಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸಭೆಯಲ್ಲಿ ತಿಳಿಸಲಾಯಿತು.
ಬಿಮ್ಸ್ ಗೆ ಅಪರ ಜಿಲ್ಲಾಧಿಕಾರಿ ನೋಡಲ್ ಅಧಿಕಾರಿ:
ಕೋವಿಡ್-19ಆಸ್ಪತ್ರೆಯಾಗಿರುವ ಬಿಮ್ಸ್ ನಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಹಾಗೂ ವೈದ್ಯರು ಮತ್ತು ಸಿಬ್ಬಂದಿ ಪಾಳಿ ಪ್ರಕಾರ ಸರಿಯಾಗಿ ಕಾರ್ಯನಿರ್ವಹಿಸುವ ಕುರಿತು ಮೇಲ್ವಿಚಾರಣೆಗೆ ಜಿಲ್ಲಾಡಳಿತದ ವತಿಯಿಂದ ಅಪರ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಚಿಕಿತ್ಸೆ ಸೇರಿದಂತೆ ಕೋವಿಡ್-19 ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕೋವಿಡ್-19 ಪರೀಕ್ಷೆ, ಚಿಕಿತ್ಸೆಗೆ ಅಗತ್ಯವಿರುವ ಹಣಕಾಸು ಸೇರಿದಂತೆ ಎಲ್ಲ ರೀತಿಯ ನೆರವನ್ನು ಜಿಲ್ಲಾಡಳಿತದ ವತಿಯಿಂದ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದರು.
ಆದ್ದರಿಂದ ಕೋವಿಡ್ ಪರೀಕ್ಷೆ, ಚಿಕಿತ್ಸೆಗೆ ಸಂಬಂಧಿಸಿದಂತೆ ಏನೇ ಅನಾನುಕೂಲತೆ, ಸಿಬ್ಬಂದಿ ಕೊರತೆ, ಅನುದಾನ ಕೊರತೆ ಅಥವಾ ತೊಂದರೆಗಳ ನೆಪ ಹೇಳಬಾರದು. ಒಂದು ವೇಳೆ ಸಮಸ್ಯೆಗಳಿದ್ದರೆ ತಕ್ಷಣವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು. ಬಿಮ್ಸ್ ಹಾಗೂ ಐಸಿಎಂಆರ್-ಎನ್.ಐ.ಟಿ.ಎಂ ಪ್ರಯೋಗಾಲಯಗಳು ಕೂಡ ಕೋವಿಡ್ ಮಾದರಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ನಿಗದಿತ ಸಮಯದಲ್ಲಿ ವರದಿ ನೀಡಬೇಕು ಎಂದು ಸೂಚಿಸಲಾಯಿತು. ಜಿಲ್ಲಾ ಹಾಗೂ ತಾಲ್ಲೂಕು ಕಂಟ್ರೋಲ್ ರೂಮ್‌ಗಳು ಸಮನ್ವಯತೆಯೊಂದಿಗೆ ಸಾರ್ವಜನಿಕರ ಅನುಕೂಲಕ್ಕೆ ಕೆಲಸ ಮಾಡಬೇಕು
ಆಕ್ಸಿಜನ್ – ಔಷಧ ಲಭ್ಯತೆ; ಮುಂಜಾಗ್ರತೆಗೆ ನಿರ್ದೇಶನ:
ಆಕ್ಸಿಜನ್-ಔಷಧ ದಾಸ್ತಾನು ಮತ್ತು ಲಭ್ಯತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸಹಾಯಕ ಔಷಧ ನಿಯಂತ್ರಕರ ಜವಾಬ್ದಾರಿಯಾಗಿದೆ. ಆದ್ದರಿಂದ ಆಕ್ಸಿಜನ್ ಮತ್ತು ಅಗತ್ಯ ಔಷಧ ಸಾಮಗ್ರಿಗಳ ಲಭ್ಯತೆ ಕುರಿತು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರದ ಹಂತದಲ್ಲಿ ಏನಾದರೂ ನೆರವು ಬೇಕಾದರೆ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಕೋವಿಡ್-19 ನಿಯಂತ್ರಣ ಕುರಿತು ಜಿಲ್ಲೆಯಲ್ಲಿ ಇದುವರೆಗೆ ಕೈಗೊಂಡ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಪರಾಮರ್ಶಿಸಲಾಯಿತು.
ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್, ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದರ್ಶನ್ ಎಚ್.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಇದುವರೆಗೆ ಕೈಗೊಂಡ ಕ್ರಮಗಳ ಕುರಿತು ಸಭೆಯಲ್ಲಿ ವಿವರಿಸಿದರು.
ಐಸಿಎಂಆರ್-ಎನ್.ಐ.ಟಿ.ಎಂ. ನಿರ್ದೇಶಕರಾದ ಡಾ.ಚಟ್ಟೋಪಾಧ್ಯಾಯ ಅವರು ಕೋವಿಡ್-19 ವೈರಸ್ ಗುಣಲಕ್ಷಣಗಳು ಮತ್ತು ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳನ್ನು ವಿವರಿಸಿದರು.
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ಉಪ ವಿಭಾಗಾಧಿಕಾರಿಗಳಾದ ಅಶೋಕ ತೇಲಿ, ಶಶಿಧರ್ ಬಗಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ, ಆರ್.ಸಿ.ಎಚ್. ಡಾ.ಐ.ಪಿ.ಗಡಾದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಸಹಾಯಕ ಔಷಧ ನಿಯಂತ್ರಕ ರಘುರಾಮ್, ಡಾ.ಎಂ.ಎಸ್.ಪಲ್ಲೇದ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಕರ್ಫ್ಯೂ ಮುಂದುವರಿಕೆ ಬಗ್ಗೆ ಗೃಹ ಸಚಿವರ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ