ಪ್ರಗತಿವಾಹಿನಿ ಸುದ್ದಿ; ಮುರಗೋಡ: ವಾಡಿಕೆಯಗಿಂತ ಮುಂಚೆಯೆ ಮುಂಗಾರು ಪ್ರಾರಂಭವಾಗಿದ್ದು ಸರ್ಕಾರ ಸಬ್ಸಿಡಿ ದರದಲ್ಲಿ ರೈತರಿಗೆ ಒದಗಿಸುತ್ತಿರುವ ಪ್ರಮಾಣೀಕೃತ ಬೀಜಗಳನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬೇಕೆಂದು ಎಪಿಎಂಸಿ ನಿರ್ದೇಶಕ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಗ್ರಾಮದ ಪಿಕೆಪಿಎಸ್ ಮೂಲಕ ಸರ್ಕಾರದ ಸಬ್ಸಿಡಿ ದರದಲ್ಲಿ ಬಂದ ಬೀಜಗಳ ವಿತರಣಾ ಕಾರ್ಯಕ್ರಮ ಪ್ರಾರಂಭಿಸಿ ಮಾತನಾಡಿದ ಅವರು, ಕೊವಿಡ್ ಮಹಾಮಾರಿ ಇಂದು ಎಲ್ಲರನ್ನು ಭಯ ಭೀತರನ್ನಾಗಿಸಿ ಕೃಷಿಯ ಮೇಲೆ ತನ್ನ ಕರಾಳತೆಯನ್ನ ಮೂಡಿಸಿ ರೈತ ಸಮುದಾಯಕ್ಕೆ ಸಾಕಷ್ಟು ತೊಂದರೆಯಾಗಿದೆ. ಆದರು ರೈತರು ಎದೆಗುಂದದೆ ಮುಂಗಾರು ಬಿತ್ತನೆಗೆ ಭೂಮಿ ಹದಗೊಳಿಸಿದ್ದಾರೆ. ಸರ್ಕಾರ ಇಂತಹ ಸಂಕಷ್ಟದ ಸಮಯದಲ್ಲಿಯು ರೈತರಿಗೆ ಸಬ್ಸಿಡಿ ದರದಲ್ಲಿ ಸೋಯಾ ಅವರೆ, ಉದ್ದು ಮತ್ತು ಹೆಸರು ಬೆಳೆಗಳ ಬೀಜವನ್ನು ವಿತರಿಸುತ್ತಿದೆ. ಈ ಎಲ್ಲ ಬೀಜಗಳು ಸರ್ಕಾರದ ಬೀಜ ನಿಗಮದಿಂದ ಪ್ರಮಾಣಿಕೃತವಾಗಿರುವದರಿಂದ ಹಾಗೂ ಮೊಳಕೆಯ ಪರೀಕ್ಷೆ ನಡೆಸಿದ ಗುಣಮಟ್ಟದ ಬೀಜಗಳಾಗಿರುವದರಿಂದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ತಾಪಂ ಸದಸ್ಯ ಸುರೇಶ ಮ್ಯಾಕಲ್ ಮಾತನಾಡಿ, ರೈತರು ಬೀಜಗಳನ್ನು ಪಡೆಯುವಾಗ ಮತ್ತು ಕೃಷಿ ಚಟುವಟಿಕೆಗಳನ್ನು ಹಮ್ಮಿಕೊಂಡಾಗ ಕೊವಿಡ್ ಸುರಕ್ಷಾ ನಿಯಮಗಳನ್ನು ಪಾಲಿಸಿ ಸುರಕ್ಷತೆಯಿಂದಿರಬೇಕು ಎಂದರು.
ಗ್ರಾಪಂ ಅಧ್ಯಕ್ಷ ಸಂಗಪ್ಪ ಬೆಳಗಾವಿ ಮಾತನಾಡಿ, ಸರ್ಕಾರದ ಸಬ್ಸಿಡಿ ಬೀಜ ಪಡೆಯಲು ರೈತರಿಗೆ ಉತಾರ, ಬ್ಯಾಂಕ್ ಪಾಸ್ ಬುಕ್ ರದ್ದುಗೊಳಿಸಿ ಕೇವಲ ಆಧಾರ ಕಾರ್ಡ ನಂಬರ ಬಳಸಿ ರೈತರಿಗೆ ತೊಂದರೆಯಾಗದಂತೆ ಬೀಜ ವಿತರಿಸಲು ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದರು.
ಮುರಗೋಡ ಹೋಬಳಿ ಮಟ್ಟಕ್ಕೆ ಸೋಯಾಬಿನ 250 ಕ್ವಿಂಟಲ್, ಹೆಸರು 20.4 ಕ್ವಿಂಟಲ್. ಉದ್ದು 90 ಕ್ವಿಂಟಲ್ ಬೀಜದ ದಾಸ್ತಾನು ಇದ್ದು, ರೈತ ಸೂರ್ಯಕಾಂತಿ, ಮತ್ತು ಗೋವಿನಜೋಳ, ಸಜ್ಜೆ ಬೀಜಗಳು ಸಧ್ಯದಲ್ಲಿ ಬರಲಿವೆ ಎಂದು ರೈತ ಸಾಹಯಕ ಕೃಷಿ ಅಧಿಕಾರಿ ನಾಗೇಶ ವಿರಕ್ತಮಠ ಮಾಹಿತಿ ನೀಡಿದರು.
ಪತ್ರಕರ್ತ ಮಹಾಂತೇಶ ಬಾಳಿಕಾಯಿ ಮಹಾಂತೇಶ ಭಜಂತ್ರಿ, ದುರ್ಗಪ್ಪ ಭಜಂತ್ರಿ, ನಾಗಪ್ಪ ಬೂದಿಗಟ್ಟಿ, ಶಿವು ಸಣಕಲ್ಲ ಇತರರು ಇದ್ದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ