ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ಅಟ್ಟಹಾಸದ ನಡುವೆಯೇ ಅದ್ದೂರಿ ಜಾತ್ರಾ ಮಹೋತ್ಸವವೊಂದು ನಡೆದಿದ್ದು, ಭಂಡಾರ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.
ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದಲ್ಲಿ ನಡೆಯುವ ಭಂಡಾರ ಜಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆದಿದ್ದು, ಸಾವಿರಾರು ಭಕ್ತರು ಜಾತ್ರೆಯಲ್ಲಿ ನೆರೆದಿದ್ದರು. ಈ ಜಾತ್ರೆಯ ವಿಶೇಷವೆಂದರೆ ದೇವರ ಪಲ್ಲಕ್ಕಿ ಉತ್ಸವದ ವೇಳೆ ಭಂಡಾರದೋಕುಳಿ ನಡೆಸಲಾಗುತ್ತದೆ. ನೆರೆದ ಭಕ್ತರು ಭಂಡಾರವನ್ನು ಪಲ್ಲಕ್ಕಿಯ ಮೇಲೆ ಎರಚಿ ಭಕ್ತಿ ಮೆರೆಯುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಸಾಗರೋಪಾದಿಯಲ್ಲಿ ಜನ ಭಾಗವಹಿಸಿದ್ದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಈ ಬಾರಿ ಜಾತ್ರೆಯಲ್ಲಿ ಸುಮಾರು ಒಂದುವರೆ ಟನ್ ನಷ್ಟು ಭಂಡಾರವನ್ನು ಪಲ್ಲಕ್ಕಿ ಮೇಲೆ ಎರಚಲಾಗಿದ್ದು, ಇಡೀ ಜಾತ್ರಾ ಸ್ಥಳದಲ್ಲಿ ಎಲ್ಲಿ ನೋಡಿದರಲ್ಲಿ ಭಂಡಾರವೇ ಕಾಣಿಸುವಂತಿತ್ತು. ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಭಂಡಾರದೋಕುಳಿ, ಡೊಳ್ಳು ಕುಣಿತ ವಿಶೇಷ. ಕೊರೊನಾ ಹಿನ್ನೆಲೆಯಲ್ಲಿ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಸರ್ಕಾರ ನಿರ್ಬಂಧ ಹೇರಿದ್ದರೂ ಕೂಡ ಇಲ್ಲಿನ ಜಾತ್ರಾ ಮಹೋತ್ಸವ ಆಚರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ