ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದು, ರೋಗಿಗಳು ನರಳಿ ನರಳಿ ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಧುಮೇಹದಿಂದ ಬಳಲುತ್ತಿದ್ದ 30 ವರ್ಷದ ಕಾಗವಾಡದ ಯುವತಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಳು. ಸೂಕ್ತ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಯುವತಿ ಸಾವನ್ನಪ್ಪಿದ್ದಾಳೆ. ಈ ಯುವತಿಗೆ ಕೊರೊನಾ ಪಾಸಿಟೀವ್ ಕೂಡ ಬಂದಿತ್ತು.
ಕಾಗವಾಡ ತಾಲೂಕಿನ 30 ವರ್ಷದ ಯುವತಿ ತೀವ್ರ ಮಧುಮೇಹದಿಂದ ಬಳಲುತ್ತಿದ್ದಳು. ಸಾಕಷ್ಟು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದರೂ ಯಾರೂ ಸಹ ಆಸ್ಪತ್ರೆಗೆ ದಾಖಲಿಸಿಕೊಂಡಿರಲಿಲ್ಲ. ಅಂತಿಮವಾಗಿ ಮೂರು ದಿನದ ಹಿಂದೆ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಳು. ಇದೇ ವೇಳೆ ಕೊರೋನಾ ಟೆಸ್ಟ್ ನಡೆಸಿದಾಗ ಸೋಂಕು ಇರೋದು ಪತ್ತೆಯಾಗಿತ್ತು. ಬಳಿಕ ಯುವತಿಯನ್ನ ಕೊರೋನಾ ವಾರ್ಡ್ಗೆ ಶಿಪ್ಟ್ ಮಾಡಲಾಗಿತ್ತು. ಆದ್ರೆ ಕೊರೋನಾ ವಾರ್ಡ್ನಲ್ಲಿ ಯುವತಿಗೆ ಸರಿಯಾದ ಚಿಕಿತ್ಸೆ ನೀಡಿಲ್ಲ. ಮಧುಮೇಹ ಹಾಗೂ ಕೊರೋನಾದಿಂದಾಗಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೂ ಯುವತಿಗೆ ಸರಿಯಾದ ಚಿಕಿತ್ಸೆ ನೀಡಿಲ್ಲ. ಅಲ್ಲದೇ ಆಕ್ಸಿಜನ್ ಕೂಡ ಕೊಟ್ಟಿಲ್ಲ ಉಸಿರಿಗಾಗಿ ಪರದಾಡಿದ ಯುವತಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಕುಟುಂಬ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವತಿ ತನಗೆ ಉಸಿರಾಡಲು ತೊಂದರೆಯಾಗುತ್ತಿರುವ ಬಗ್ಗೆ ಹೇಳುತ್ತಿರುವ ಆಸ್ಪತ್ರೆ ಬೆಡ್ ಮೇಲೆ ನರಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
2 ದಿನಗಳ ಹಿಂದೆ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅಥಣಿ ತಾಲೂಕಿನ ವೃದ್ಧ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ವೃದ್ದನಿಗೆ ಕೂಡ ಕೊರೋನಾ ಸೋಂಕು ಧೃಡಪಟ್ಟಿತ್ತು. ಮೂರು ದಿನದಿಂದ ಯಾವುದೇ ಚಿಕಿತ್ಸೆ ನೀಡಿರಲಿಲ್ಲ. ಹೊಟ್ಟೆ ನೋವು ತಾಳದೇ ಒದ್ದಾಡಿದರೂ ಯಾವೊಬ್ಬ ಸಿಬ್ಬಂದಿಯೂ ಸುಳಿದಿರಲಿಲ್ಲ. ಕೊನೆಗೆ ವೃದ್ದ ಚಿಕಿತ್ಸೆ ಸಿಗದೆ ಪ್ರಾಣ ಬಿಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಬಿಮ್ಸ್ ಆಸ್ಪತ್ರೆಯಲ್ಲಿಯೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಮ್ಸ್ ವೈದ್ಯಕೀಯ ನಿರ್ದೇಶಕ ವಿನಯ ದಾಸ್ತಿಕೊಪ್ಪ, ಯುವತಿ ಆಸ್ಪತ್ರೆಗೆ ದಾಖಲಾಗುವಾಗಲೇ ಗಂಭೀರ ಸ್ಥಿತಿಯಲ್ಲಿದ್ದಳು. ಎಲ್ಲ ರೀತಿಯ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ ಎಂದಿದ್ದಾರೆ.
ಘಟನೆ ಕುರಿತು ತನಿಖೆ ನಡೆಸುವಾದಾಗಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ