ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಕೊರೊನಾ ಆರ್ಭಟದ ನಡುವೆ ಇದೀಗ ಬ್ಲ್ಯಾಕ್ ಫಂಗಸ್ ಹಾಗೂ ವೈಟ್ ಫಂಗಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ 9 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದರೆ, ಇಬ್ಬರಲ್ಲಿ ವೈ ಫಂಗಸ್ ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಶಶಿಕಾಂತ, ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವ 9 ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ವೈಟ್ ಫಂಗಸ್ ಪತ್ತೆಯಾದ ಇಬ್ಬರೂ ಸಾವನ್ನಪ್ಪಿದ್ದಾರೆ. ಕೊರೊನಾ ಚಿಕಿತ್ಸೆ ಅಡ್ಡಪರಿಣಾಮಗಳಲ್ಲಿ ಈ ಶಿಲೀಂದ್ರ ಸೋಂಕು ಪ್ರಮುಖವಾಗಿವೆ ಎಂದರು.
ಗೋಕಾಕ್ ಹಾಗೂ ಅಥಣಿಯಲ್ಲಿ 70 ವರ್ಷ ಮೇಲ್ಪಟ್ಟ ಇಬ್ಬರಲ್ಲಿ ವೈಟ್ ಫಂಗಸ್ ಪತ್ತೆಯಾಗಿದ್ದು, ಇಬ್ಬರೂ ಮೃತಪಟ್ಟಿದ್ದಾರೆ. ಇನ್ನುಳಿದಂತೆ ಆಯಾ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ
ಆಕ್ಸಿಜನ್ ಪೈಪ್ ಲೈನ್ ನಲ್ಲಿ ಡಿಸ್ಟಿಲ್ಡ್ ವಾಟರ್ ಬದಲಿಗೆ ಅಸಮರ್ಪಕ ನೀರಿನ ಬಳಕೆಯಿಂದ ಬ್ಲ್ಯಾಕ್ ಫಂಗಸ್ ಅಪಾಯ ಹೆಚ್ಚು. ರೋಗಿಗೆ ನೀಡಲಾದ ಆಕ್ಸಿಜನ್ ಪೈಪ್ ಲೈನ್ 48 ಗಂಟೆಗಳಲ್ಲಿ ಬದಲಿಸಬೇಕು. ಮಾಸ್ಕ್ ಪ್ರತಿ ನಿತ್ಯ ಬದಲಾಯಿಸಿ ಬಿಸಿ ನೀರಿನಲ್ಲಿ ಸ್ವಚ್ಛವಾಗಿ ತೊಳೆದು ಒಣಗಿಸಬೇಕು, ಬಟ್ಟೆ ಸ್ವಚ್ಛವಾಗಿರಬೇಕು. ಕೊರೊನಾ ಸೋಂಕಿತ ವೃದ್ಧರಲ್ಲಿ ಅತಿಯಾದ ಸ್ಟಿರಾಯ್ಡ್, ಆಕ್ಸಿಜನ್, ಮಾಸ್ಕ್ ಬಳಕೆಯಿಂದ ಮಧುಮೇಹಿ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬರುತ್ತಿದೆ ಎಂದು ಹೇಳಿದರು.
ಅಂಬುಲೆನ್ಸ್ ಸೇವೆ ಆರಂಭ: ಅಗತ್ಯವಾದರೆ ಇಲ್ಲಿ ಸಂಪರ್ಕಿಸಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ