ಕೋವಿಡ್ ಮಾರ್ಗಸೂಚಿ, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ;ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಮಾರ್ಗಸೂಚಿ ಹಾಗೂ ಜಿಲ್ಲೆಯ ಭಾಗಾಂಶ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆದ್ದರಿಂದ ಬೆಳಗಾವಿ ಜಿಲ್ಲೆಯ ಸಮಸ್ತ ಸಾರ್ವಜನಿಕರು, ಸಂಘ, ಸಂಸ್ಥೆಗಳು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವ ಪೂರ್ವದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೋವಿಡ್-19 ರೂಪಾಂತರಿ ಪ್ರಕರಣಗಳು ಅತಿಯಾಗಿ ಹೆಚ್ಚುತ್ತಿರುವುದರಿಂದ ಮತ್ತು ರಾಜ್ಯದಲ್ಲಿಯೂ ಸಹ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುತ್ತೋಲೆಯಲ್ಲಿ ಪ್ರಸ್ತುತ ಇರುವ ಪ್ರಕ್ಷುಬ್ಧ ವಾತಾವರಣದ ನಿಯಂತ್ರಣಕ್ಕಾಗಿ ಒಂದೇ ಸಮಯದಲ್ಲಿ ಸಾರ್ವಜನಿಕರ ಒಗ್ಗೂಡುವಿಕೆಯನ್ನು ಮುಚ್ಚಿದ ಪ್ರದೇಶದಲ್ಲಿ ಗರಿಷ್ಠ 100 ಹಾಗೂ ತೆರೆದ ಪ್ರದೇಶದಲ್ಲಿ ಗರಿಷ್ಠ 500 ಜನರ ಮಿತಿಯನ್ನು ಸೀಮಿತಗೊಳಿಸಿ ಆದೇಶಿಸಿರುತ್ತಾರೆ.
ಅದೇ ರೀತಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ನಿಮಿತ್ತ ದಿನಾಂಕ: 16.03.2021 ರಿಂದ ಅನ್ವಯವಾಗುವಂತೆ ಬೆಳಗಾವಿ ಜಿಲ್ಲೆಯ ಭಾಗಾಂಶಕ್ಕೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಎಲ್ಲಾ ಪ್ರಜ್ಞಾವಂತ ನಾಗರೀಕರು ವೈರಾಣುವಿನಿಂದ ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತವು ಕಾಲಕಾಲಕ್ಕೆ ತೆಗೆದುಕೊಳ್ಳಬಹುದಾದ ಕಠಿಣ ತೀರ್ಮಾನಗಳಿಗೆ ಸಂಪೂರ್ಣ ಸಹಕಾರ ನೀಡಲು ಕೋರಲಾಗಿದೆ.
ಒಂದು ವೇಳೆ ಚುನಾವಣೆ ನೀತಿಸಂಹಿತೆ ಅಥವಾ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಉಲ್ಲಂಘಿತರ ವಿರುದ್ಧ ಕಡ್ಡಾಯವಾಗಿ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರಿಶ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ