ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಹೋರಾಡಲು ಕಾಂಗ್ರೆಸ್ ಗೆ ಬೆಂಬಲ ನೀಡುವ ಅಗತ್ಯವಿದೆ. ಜನರ ಕಷ್ಟ ಸುಖ ಆಲಿಸಿ, ಸಂಸತ್ ನಲ್ಲಿ ಜನರ ಪ್ರತಿನಿಧಿಯಾಗಿ ಧ್ವನಿ ಎತ್ತುವವರು ಬೇಕು. ಹಾಗಾಗಿ ಅಂತಹ ಅಭ್ಯರ್ಥಿ ಶತೀಶ್ ಜಾರಕಿಹೊಳಿ ಅವರನ್ನು ಉಪಚುನಾವಣೆಯಲ್ಲಿ ಆರಿಸಿ ಸಂಸತ್ ಗೆ ಕಳುಹಿಸಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಗೆಲ್ಲುವ ಲಕ್ಷಣಗಳಿವೆ ಎಂದರು. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಏಕಾಏಕಿ ನೋಟ್ ಬ್ಯಾನ್ ಮಾಡಿ ಬಡ ಸಂಸಾರಗಳನ್ನು ಹಾಳುಮಾಡಿದರು, ದಿಢೀರ್ ಲಾಕ್ ಡೌನ್ ಮಾಡಿ ಹೊತ್ತಿನ ಊಟಕ್ಕೂ ಸಂಕಷ್ಟಪಡುವಂತೆ ಮಾಡಿದರು. ಉದ್ಯೋಗದ ಭರವಸೆಗಳನ್ನು ನಿರುದ್ಯೋಗ ಹೆಚ್ಚುವಂತೆ ಮಾಡಿದರು. ಬಡವರಿಗೆ ಮಧ್ಯಮ ವರ್ಗದವರಿಗೆ ಯುವಕರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ. ರೈತರ ಸಂಕಷ್ಟವನ್ನು ಆಲಿಸುತ್ತಲೂ ಇಲ್ಲ ಎಂದು ಕಿಡಿಕಾರಿದರು.
ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಅಡುಗೆ ಅನಿಲ ಸೇರಿದಂತೆ ಪ್ರತಿಯೊಂದರ ಬೆಲೆ ಏರಿಕೆಯಾಗುತ್ತಿದೆ. ಇಷ್ಟಾದರೂ ನಾವು ಪ್ರತಿಭಟಿಸುತ್ತಿಲ್ಲ ಎಂದರೆ ನಾವು ಮಾಡಿದ್ದೇ ಸರಿ ಎಂದು ಪ್ರಧಾನಿ ಮೋದಿ ಭಮೆಯಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಜನರ ಕಷ್ಟ ವನ್ನು ಆಲಿಸಿ ಜನರ ಧ್ವನಿಯಾಗುವ ವ್ಯಕ್ತಿಯನ್ನು ಬೆಳಗಾವಿಯಿಂದ ಆರಿಸಿಕೊಳಿಸಬೇಕಿದೆ. ಆ ಮೂಲಕ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ವೀಕ್ಷಕ ಮಧು ಯಕ್ಷಿಗೌಡ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ರಾಜ್ಯದ ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್ ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ