*ಕೆಲಸದ ಆಮಿಷ: ಸೈಬರ್ ವಂಚಕರ ಬಲೆಗೆ ಬಿದ್ದು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿದ್ದ ಬೆಳಗಾವಿಯ ಮೂವರು ಯುವಕರ ರಕ್ಷಣೆ*

ಪ್ರಗತಿವಾಹಿನಿ ಸುದ್ದಿ: ಸೈಬರ್ ವಂಚಕರ ಜಾಲದಲ್ಲಿ ಸಿಲುಕಿ ಕಾಂಬೋಡಿಯಾದಲ್ಲಿ ತಿಂಗಳುಗಟ್ಟಲೇ ವಂಚಕರ ಬಳಿ ಒತ್ತೆಯಾಳಾಗಿದ್ದ ಬೆಳಗಾವಿಯ ಮೂವರು ಯುವಕರನ್ನು ರಕ್ಷಿಸಿ ತವರಿಗೆ ಕರೆ ತರುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಸುರೇಶ್ ಹುಂದ್ರೆ, ಆಸೀಫ್ ಅಲ್ವಾನ್, ಜಾರ್ಖಂಡ್ ಮೂಲದ ಅಮಿತ್ ಎಂಬುವರು ಹಾಂಕಾಂಗ್ ನಲ್ಲಿ ಉತ್ತಮ ಸಂಬಳದ ಕೆಲಸವಿದೆ. ಡೇಟಾ ಎಂಟ್ರಿ ಆಪರೇಟರ್ ಗಳಿಗೆ ತಿಂಗಳಿಗೆ 1 ಲಕ್ಷ ಸಂಬಂಳ ಇದೆ. ಕೆಲಸಕೊಡಿಸುತ್ತೇವೆ ಎಂದು ಏಜೆಂಟರು ನೀಡಿದ ಆಮಿಷ ನಂಬಿದ ಮೂವರು ಯುವಕರು ವಿದೇಶಕ್ಕೆ ಹಾರಿದ್ದಾರೆ. ಹಾಂಕಾಂಗ್ ಗೆ ಎಂದು ಕರೆದೊಯ್ದ ವಂಚಕರು ಮೂವರು ಯುವಕರನ್ನು ಕಾಂಬೋಡಿಯಾಗೆ ಕರೆದೊಯ್ದಿದ್ದಾರೆ.
ಆಕಾಶ್ ಕಾಗಣಿಕರ್, ಓಂಕಾರ ಲೊಖಾಂಡೆ, ಸಂಸ್ಕಾರ ಲೊಖಾಂಡೆ ಎಂಬ ಮೂವರು ಯುವಕರನ್ನು ಕಾಂಬೋಡಿಯಾದ ಸೈಬರ್ ವಂಚಕರಿಗೆ ಒಪ್ಪಿಸಲಾಗಿದೆ. ಖದೀಮರು ಮೂವರು ಯುವಕರಿಗೆ ಪ್ರತಿ ದಿನ ಭಾರತದಲ್ಲಿರುವವರಿಗೆ ಫೋನ್, ವಾಟ್ಸಾಪ್, ಇನ್ ಸ್ಟಾ ಗ್ರಾಂ, ಮೂಲಕವಾಗಿ ಸೈಬರ್ ವಂಚನೆ ಮಾಡಿಸುತ್ತಿದ್ದರು. ಈ ಕೆಲಸ ನಮ್ಮಿಂದಾಗದು ನಾವು ಮಾಡುವುದಿಲ್ಲ ನಮ್ಮನ್ನು ಬಿಟ್ಟುಬಿಡಿ ಎಂದು ಯುವಕರು ಬೇಡಿಕೊಂಡರೂ ಬಿಟ್ಟಿಲ್ಲ. ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿ ಬೆದರಿಕೆ ಹಾಕಿ ಕೆಲಸ ಮಾಡಿಸುತ್ತಿದ್ದರು.
ಇತ್ತ ಬೆಳಗಾವಿ ಸಿಇಎನ್ ಠಾಣೆಯಲ್ಲಿ ಆಕಾಶ್ ಹಾಗೂ ಲೊಖಾಂಡೆ ಸಹೋದರರ ಪೋಷಕರು ದೂರು ನೀಡಿದ್ದರು, ಕೆಲಸಕ್ಕೆಂದು ಕರೆದೊಯ್ದು ಕಾಂಬೋಡಿಯಾದಲ್ಲಿ ವಂಚಕರಿಗೆ ನೀಡಿದ್ದಾಗಿ ದೂರಿದ್ದಾರೆ. ತನಿಖೆ ನಡೆಸಿದ ಪೊಲೀಸರು ಬೆಳಗಾವಿ ಕಮಿಷನರ್ ಮೂಲಕವಾಗಿ ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು.
ಕಾಂಬೋಡಿಯಾ ಪೊಲೀಸರು ಸೈಬರ್ ವಂಚಕರ ಸೆಂಟರ್ ಮೇಲೆ ದಾಳಿ ನಡೆಸಿದ್ದು ಈ ವೇಳೆ ಭಾರತ ಸೇರಿದಂತೆ ವಿವಿಧ ದೇಶಗಳ ಒಟ್ಟು 50 ಯುವಕರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಅವರಲ್ಲಿ ಬೆಳಗಾವಿಯ ಮೂವರು ಯುವಕರನ್ನು ರಕ್ಷಿಸಿ ಕರೆತರಲಾಗಿದೆ.
ಬೆಳಗಾವಿಯಲ್ಲಿ ಏಜೆಂಟ್ ಕೆಲಸ ಮಾಡಿಕೊಂಡು ಯುವಕರಿಗೆ ವಂಚಿಸಿದ್ದ ಆರೋಪಿಗಳು ನಾಪತ್ತೆಯಾಗಿದ್ದು, ಅವರ ಬಂಧನಕ್ಕೂ ಬಲೆ ಬೀಸಲಾಗಿದೆ.




