Kannada NewsLatest

ಮೊಟ್ಟೆ ವಿತರಣೆ: ಆದೇಶ ಹಿಂಪಡೆಯಲು ಆಗ್ರಹಿಸಿ ಜೈನ ಯುವ ಸಂಘಟನೆ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಊಟದ ಸಂದರ್ಭದಲ್ಲಿ ಪೌಷ್ಟಿಕ ಆಹಾರವಾಗಿ ಮೊಟ್ಟೆ ನೀಡುವಂತೆ ಸರಕಾರ ಆದೇಶ ಹೊರಡಿಸಿದ್ದು, ಈ ಆದೇಶವನ್ನು ತತ್‌ಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಇಂದು ಮಂಗಳವಾರ ಬೆಳಗಾವಿಯಲ್ಲಿ ಜೈನ ಯುವ ಸಂಘಟನೆಯ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಅರ್ಪಿಸಲಾಯಿತು.

ವಿಧಾನ ಪರಿಷತ್ ಚುನಾವಣೆಯ ಪ್ರಚಾರಾರ್ಥ ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲಿ ಜೈನ ಯುವ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕರ್ನಾಟಕ ಸರಕಾರ ಇತ್ತಿಚಿಗೆ ಸರಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಪೌಷ್ಠಿಕಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಯನ್ನು ಆಹಾರವಾಗಿ ನೀಡುವಂತೆ ಆದೇಶ ಹೊರಡಿಸಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಎಲ್ಲ ಧರ್ಮ, ಜಾತಿ , ಸಮುದಾಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ಇದರಲ್ಲಿ ಜೈನ ವಿದ್ಯಾರ್ಥಿಗಳು ಸಹ ಸೇರಿದಂತೆ ಇನ್ನಿತರ ಸಂಪೂರ್ಣ ಸಸ್ಯಹಾರಿ ಸೇವನೆ ಮಾಡುವ ಸಮಾಜದ ವಿದ್ಯಾರ್ಥಿಗಳು ಸಹ ಸೇರಿದ್ದಾರೆ. ತಮಗೆ ತಿಳಿದಿರುವಂತೆ ಜೈನ ಧರ್ಮ ಅಹಿಂಸಾ ತತ್ವಗಳನ್ನು ಪಾಲಿಸುವ ಧರ್ಮವಾಗಿದ್ದು, ಮೊಟ್ಟೆ ಸೇವನೆ ಧರ್ಮದ ವಿರುದ್ದವಾಗಿ ನಡೆದಂತಾಗುತ್ತದೆ.

ಈಗಾಗಲೇ ನಾಡಿನ ಜೈನ ಧರ್ಮಗುರುಗಳಾದ ಭಟ್ಟಾರಕ ಸ್ವಾಮಿಜಿಗಳು, ಲಿಂಗಾಯತ ಧರ್ಮದ ಸ್ವಾಮಿಜಿಗಳು ಈ ಬಗ್ಗೆ ತಮ್ಮ ಗಮನ ಸೆಳೆದಿದ್ದಾರೆ. ಮಕ್ಕಳಲ್ಲಿ ಪೌಷ್ಟಿಕಾಂಶ ಬೆಳೆಸಬೇಕಾದರೆ ಮೊಟ್ಟೆಯ ಬೇಕು ಎಂದಿಲ್ಲ. ಬೇರೆ ಆಹಾರ ಪದಾರ್ಥಗಳನ್ನು ಸಹ ನೀಡಬಹುದು. ಮಧ್ಯಾಹ್ನ ಊಟದಲ್ಲಿ ಹಾಲು, ಮೊಸರು, ಮಜ್ಜಿಗೆ, ಹಣ್ಣು ಹಂಪಲ ಇತ್ಯಾದಿಗಳನ್ನು ಸಹ ನೀಡಿ ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶ ಬೆಳೆಸಬಹುದಾಗಿ. ಹಾಗಾಗಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ನೀಡುವ ಕುರಿತು ಸರಕಾರ ಹೊರಡಿಸಿದ ಆದೇಶವನ್ನು ಹಿಂಪಡೆದುಕೊಂಡು ಹಣ್ಣು, ಹಂಪಲ ಇತ್ಯಾದಿ ಸಸ್ಯಹಾರಿ ತಿನಿಸುಗಳನ್ನು ನೀಡುವ ಮೂಲಕ ಜೈನ ಧರ್ಮಿಯರಿಗೆ ಧರ್ಮ ಪಾಲನೆಗೆ ಅವಕಾಶ ನೀಡಬೇಕು ಮತ್ತು ಸಂಪೂರ್ಣ ಸಸ್ಯಹಾರಿ ಸೇವನೆ ಮಾಡುವ ಇತರೆ ಸಮಾಜದ ವಿದ್ಯಾರ್ಥಿಗಳಿಗೂ ಸಹ ನ್ಯಾಯ ಒದಗಿಸಬೇಕೆಂದು ಜೈನ ಯುವ ಸಂಘಟನೆಯ ಪದಾಧಿಕಾರಿಗಳು ಮುಖ್ಯಮಂತ್ರಿಗಳಲ್ಲಿ ಆಗ್ರಹಿಸಿದರು.

ಇದರ ಜೊತೆಗೆ ರಾಜ್ಯದಲ್ಲಿ ಮತಾಂತರ ನಡೆಸುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು , ಶೀಘ್ರವೇ ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕೆಂದು ಮನವಿ ಮಾಡಲಾಯಿತು. ಈ ಬಗ್ಗೆ ಕಳೆದ ತಿಂಗಳಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆಯೂ ಸರಕಾರವೂ ಗಂಭೀರವಾಗಿ ಚಿಂತನೆ ನಡೆಸಬೇಕೆಂದು ಮುಖ್ಯಮಂತ್ರಿಗಳ ಬಳಿ ನಿವೇದಿಸಿಕೊಳ್ಳಲಾಯಿತು.

ಇದೆ ಸಂದರ್ಭದಲ್ಲಿ ಜೈನ ಯುವ ಸಂಘಟನೆಯ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಶಾಸಕ ಸಂಜಯ ಪಾಟೀಲ ಉಪಸ್ಥಿತರಿದ್ದರು. ಜೈನ ಯುವ ಸಂಘಟನೆಯ ಪದಾಧಿಕಾರಿಗಳಾದ ಕುಂತಿನಾಥ ಕಲಮನಿ, ಅಭಯ ಅವಲಕ್ಕಿ, ಭರತ ಕರೆಣ್ಣವರ, ಸಂತೋಷ ಸಾತಗೌಡ, ಸಂದೀಪ ಸೈಬಣ್ಣವರ, ಉದಯ ಪದ್ಮಣ್ಣವರ, ಅಜೀತ ಪದ್ಮಣ್ಣವರ, ಸುನಿಲ ಬಸ್ತವಾಡ, ಜೀನೇಂದ್ರ ಜುಟ್ಟಿಂಗ, ಅಕ್ಷಯ ಪಾಟೀಲ, ದೀಪಕ ಕೋಚೆರಿ, ಸಂತೋಷ ಬೆಳಗಾವಿ, ಧನಪಾಲ ಪಾಟೀಲ ,ಅಜೀತ ಪಾಟೀಲ, ಪದ್ಮಪ್ರಸಾದ ಪಾಟೀಲ, ಸಾಗರ ಗೌರಣ್ಣಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಸಂಸದರಿಗೆ ಖಡಕ್ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button