ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಆವಾಜ್ ಹಾಕಿ ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿರುವ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿ ಮಹಿಳೆಯ ಕುಟುಂಬಸ್ಥರು ಸಮುದಾಯ ಆರೋಗ್ಯ ಕೇಂದ್ರದ ಎದುರು ಗಲಾಟೆ ನಡೆಸಿ, ವೈದ್ಯರಿಗೆ ಆವಾಜ್ ಹಾಕಿ ಆರೋಗ್ಯ ಕೇಂದ್ರದಲ್ಲೇ ಹೆರಿಗೆ ಮಾಡುವಂತೆ ಮಾಡಿದ್ದಾರೆ. ಇನ್ನು ಸೋಂಕಿತ ಗರ್ಭಿಣಿಗೆ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಆಗಿದ್ದರಿಂದ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ.
ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ನಿಪ್ಪಾಣಿಯ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿ ಕರೆದುಕೊಂಡು ಬಂದಿದರು. ಕೊವಿಡ್-19 ನಿಯಮಗಳ ಪ್ರಕಾರ ಗರ್ಭಿಣಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಿದಾಗ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗರ್ಭಿಣಿಯನ್ನ ಹೆರಿಗೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರಗೆ ಕರೆದೊಯ್ಯಲು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು. ಬೆಳಗಾವಿಗೆ ರೋಗಿಯನ್ನ ಕರೆದುಕೊಂಡು ಹೋಗುವಾಗ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ವಾಹನ ತಡೆದು ಧಮ್ಕಿ ಹಾಕಿದ ಕುಟುಂಬಸ್ಥರು ಹಾಗೂ ಬೆಂಬಲಿಗರು ಅಂಬ್ಯಲೆನ್ಸ್ ಮರಳಿ ನಿಪ್ಪಾಣಿ ಆಸ್ಪತ್ರೆಗೆ ಕರೆ ತಂದು ಜಿಲ್ಲಾಸ್ಪತ್ರೆಗೆ ಕರೆದೊಯ್ಯದಂತೆ ಆಸ್ಪತ್ರೆ ಎದುರು ಗಲಾಟೆ ನಡೆಸಿದ್ದಾರೆ.
ಪಟ್ಟಣದ ಆರೋಗ್ಯ ಕೇಂದ್ರದಲ್ಲಿಯೇ ಹೆರಿಗೆ ಮಾಡಿಸುವಂತೆ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರಿಗೆ ಆವಾಜ್ ಹಾಕಿದ್ದಾರೆ. ವೈದ್ಯರು ಕೂಡ ಕುಟುಂಬಸ್ಥರ ಗಲಾಟೆ ಹಾಗೂ ಒತ್ತಾಯದಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲೇ ಸೋಂಕಿತೆಗೆ ಹೆರಿಗೆ ಮಾಡಿದ್ದಾರೆ. ಸೋಂಕಿತೆಗೆ ಹೆರಿಗೆ ಮಾಡಿದ್ದರಿಂದ ಆರೋಗ್ಯ ಕೇಂದ್ರವನ್ನು ಸ್ಯಾನಿಟೈಸ್ ಮಾಡಿ ಸೀಲ್‍ಡೌನ್ ಮಾಡಲಾಗಿದ್ದು, ಬಾಣಂತಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ