ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ನಗರದ ವಂಟಮುರಿ ಕಾಲನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ (ಏ.18) ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡರು.
ಇದಕ್ಕೂ ಎಂಟು ವಾರಗಳ ಮುಂಚೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಅನ್ನು ಅವರು ಪಡೆದುಕೊಂಡಿದ್ದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ; ಆದ್ದರಿಂದ ಸರ್ಕಾರದ ಮಾರ್ಗಸೂಚಿ ಪ್ರಕಾರ ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಪ್ರತಿದಿನ 30 ಸಾವಿರ ಲಸಿಕೆ:
ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮ ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ಜನರು ಉತ್ಸಾಹದಿಂದ ಲಸಿಕೆಯನ್ನು ಪಡೆದುಕೊಳ್ಳುತ್ತಿದ್ದು, ಪ್ರತಿದಿನ 30 ಸಾವಿರ ಲಸಿಕೆಯನ್ನು ನೀಡಲು ಕ್ರಮಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು.
ದೊಡ್ಡ ಜಿಲ್ಲೆಯಾಗಿರುವುದರಿಂದ ಎಲ್ಲ ಕಡೆಯೂ ಏಕರೂಪವಾಗಿ ಲಸಿಕೆ ಪೂರೈಸುವುದರಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಯ ಉಂಟಾಗಿರಬಹುದು. ಆದರೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಅಪನಂಬಿಕೆ ಬೇಡ; ಮಾರ್ಗಸೂಚಿ ಪಾಲಿಸಿ:
ಕೋವಿಡ್-19 ಲಸಿಕೆ ಪಡೆದುಕೊಂಡ ಬಳಿಕವೂ ಸೋಂಕು ಬರುತ್ತದೆ ಎಂಬ ಅಪನಂಬಿಕೆ ಬೇಡ. ಲಸಿಕೆ ಪಡೆಸ ಬಳಿಕವೂ ಮಾಸ್ಕ್ ಧರಿಸುವುದು; ಸ್ಯಾನಿಟೈಸರ್ ಬಳಕೆ ಹಾಗೂ ಅಂತರ ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಲಸಿಕೆ ಪಡೆದುಕೊಂಡ ಬಳಿಕವೂ ಒಂದು ವೇಳೆ ಸೋಂಕು ತಗುಲಿದರೂ ಅಪಾಯದ ಪ್ರಮಾಣ ಕಡಿಮೆ ಇರುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಪಡೆದುಕೊಳ್ಳಬೇಕು. ಅಪನಂಬಿಕೆ ಅಥವಾ ಸುಳ್ಳುಸುದ್ದಿಗಳಿಗೆ ಕಿವಿಗೊಡದೇ 45 ವರ್ಷ ಮೇಲ್ಪಟ್ಟವರು ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಜನತೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನಾಧಿಕಾರಿ ರವೀಂದ್ರ ಕರಲಿಂಗಣ್ಣವರ ಅವರು ಲಸಿಕೆಯನ್ನು ಪಡೆದುಕೊಂಡರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮತ್ತಿತರರು ಉಪಸ್ಥಿತರಿದ್ದರು.
ಲಾಕ್ ಡೌನ್ ಕುರಿತು ಸಚಿವ ಆರ್.ಅಶೋಕ್ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ