Kannada NewsLatest

ಸರ್ಕಾರದ ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬ ಆಚರಿಸಲು ಅವಕಾಶ: ಜಿಲ್ಲಾಧಿಕಾರಿ ಹಿರೇಮಠ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬ ಆಚರಣೆ ಮಾಡಬೇಕು. ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಮ್.ಜಿ. ಹಿರೇಮಠ ತಿಳಿಸಿದ್ದಾರೆ.

ಆಗಸ್ಟ್ 1 ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿ ಹಾಗೂ ಕಾನೂನು‌ ಸುವ್ಯವಸ್ಥೆ ಕಾಪಾಡುವ ನಿಮಿತ್ತ ಬುಧವಾರ (ಜು.೨೯) ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕ ಸರ್ಕಾರ ಕೋವಿಡ್-೧೯ ಹಿನ್ನೆಲೆಯಲ್ಲಿ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಬೇಕು. ಪ್ರಮುಖವಾಗಿ ಪ್ರಾರ್ಥನೆ ಮಾಡುವವಾಗ ಮಸೀದಿಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ‌ಬಕ್ರೀದ್ ಹಬ್ಬದ ದಿನದಂದು ಮಸೀದಿಗಳಲ್ಲಿ 50 ಜನಕ್ಕಿಂತ ಮೀರಿ ಪ್ರಾರ್ಥನೆ ಸಲ್ಲಿಸುವಂತಿಲ್ಲ ‌ಎಂದು ಹೇಳಿದರು.

ಹಬ್ಬ ಆಚರಣೆ ಮಾಡುವ ಸಂದರ್ಭದಲ್ಲಿ ಮಾರ್ಗಸೂಚಿಯನ್ನು ಬಿಟ್ಟು ಹಬ್ಬ ಆಚರಣೆ ಮಾಡಬಾರದು. ಹೆಚ್ಚಾಗಿ ಜನರು ಬರುವ ಮಸೀದಿಗಳಲ್ಲಿ ಟೋಕನ್ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ ಎಂದು ಧಾರ್ಮಿಕ ಮುಖಂಡರಿಗೆ ಜಿಲ್ಲಾಧಿಕಾರಿ ಹಿರೇಮಠ ಅವರು ಸಲಹೆ ನೀಡಿದರು.

ಕೋವಿಡ್-೧೯ ಹಿನ್ನೆಲೆಯಲ್ಲಿ ಜನರ ಆರೊಗ್ಯದ ದೃಷ್ಟಿಯಿಂದ ಜನರಿಗೆ ಮನೆಯಿಂದಲೇ ಪ್ರಾರ್ಥನೆ ಮಾಡಲು ಮನವಿ ಮಾಡಿಕೊಳ್ಳಬೇಕು. ಮಕ್ಕಳು, ಹಿರಿಯರು ಮನೆಯಿಂದ ಮಸೀದಿಗಳಿಗೆ ತೆರಳದಂತೆ ನೋಡಿಕೊಳ್ಳಬೇಕು. ಪ್ರಾರ್ಥನೆಗೆ ಬರುವವರಿಗೆ ಸಮಯ ನಿಗದಿ ಮಾಡಿ, ಟೋಕನ್ ನೀಡಬೇಕು. ಜನರು ಹೆಚ್ಚಾಗಿ ಸೇರುವ ಮಸೀದಿಗಳಲ್ಲಿ ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಜನರು ಪ್ರಾರ್ಥನೆಗೆ ಮಾಡುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಂಟೇನ್ಮೆಂಟ್ ಝೋನ್ ನಲ್ಲಿ ಇರುವ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಯಾರಿಗೂ ಅವಕಾಶ ಇರುವುದಿಲ್ಲ ಸರ್ಕಾರದ ಮಾರ್ಗಸೂಚಿ ಪ್ರಕಾರ 10 ವರ್ಷ ಕೆಳಗಿನ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮಸೀದಿಗಳಿಗೆ ತೇರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ.‌ ಆದರೆ ಅವರನ್ನು ಹೊರತುಪಡಿಸಿ ಬೇರೆಯವರಿಗೆ ರೋಗದ ಲಕ್ಷಣಗಳು ಇದ್ದರೆ ಅಂತಹ ಜನರಿಗೆ ಮಸೀದಿಗೆ ಬಾರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರದ ಮಾರ್ಗಸೂಚಿಯನ್ನು ಧರ್ಮಗುರುಗಳ ಮುಖಾಂತರ ಪ್ರಚಾರ ಮಾಡಿ, ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಪ್ರತಿ ಮಸೀದಿಗಳಿಗೆ ಸ್ವಯಂ ಸೇವಕರ ನೇಮಕ ಮಾಡಿಕೊಳ್ಳಬೇಕು. ಪ್ರಾರ್ಥನೆಯ ಸಂದರ್ಭದಲ್ಲಿ ಸ್ಯಾನಿಟೈಜರ್, ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ಹ್ಯಾಂಡ್ ಗ್ಲೋಸ್ ವ್ಯವಸ್ಥೆ ಮಾಡಬೇಕು. ಮಸೀದಿ ಒಳಗಡೆ ಒಂದೇ ಸಮಯಕ್ಕೆ 50 ಜನರಿಗೆ ಪ್ರಾಥನೆ ಸಲ್ಲಿಸಲು ಅವಕಾಶ ಇರುವುದರಿಂದ ಪ್ರತಿ ಬ್ಯಾಚ್ ಗಳಿಗೆ ಸಮಯ ನಿಗದಿಪಡಿಸಿಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಹೇಳಿದರು.

ನಗರ ಪೊಲೀಸ್ ಆಯುಕ್ತ ಎನ್. ತ್ಯಾಗರಾಜನ್ ಮಾತನಾಡಿ, ಸರ್ಕಾರ ೫೦ ಜನರಿಗೆ ಏಕಾಲಕ್ಕೆ ಪ್ರಾರ್ಥನೆ ಸಲ್ಲಿಸಲ್ಲು ಅವಕಾಶ ಕಲ್ಪಿಸಿದೆ. ಆದರೆ ಕೆಲವು ಮಸೀದಿಗಳಲ್ಲಿ ಅಷ್ಟೊಂದು ಸ್ಥಳಾವಕಾಶ ಇರುವುದಿಲ್ಲ ಹಾಗಾಗಿ ಅದರ ಬಗ್ಗೆ ಕ್ರಮ ವಹಿಸಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಒಂದು ಬ್ಯಾಚ್ ಪ್ರಾರ್ಥನೆ ಮುಗಿಸಿದ ಬಳಿಕ ಮಸೀದಿ ಒಳಗಡೆ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕು. ಒಂದು ಕುಟುಂಬದಿಂದ ಎಲ್ಲ ಸದಸ್ಯರು ಪ್ರಾರ್ಥನೆಗಾಗಿ ಮಸೀದಿಗೆ ಹೊಗುವುದಕಿಂತ ಒಂದು ಕುಟುಂಬದಿಂದ ಒಬ್ಬರೆ ಪ್ರಾರ್ಥನೆಗೆ ಬರುವಂತೆ ನೋಡಿಕೊಳ್ಳುವುದು ಉತ್ತಮ ಎಂದು ನಗರ ಪೊಲೀಸ್ ಆಯುಕ್ತ ಎನ್. ತ್ಯಾಗರಾಜನ್ ಅವರು ತಿಳಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ತುಕ್ಕಾರ, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್. ಕೆ.ಎಚ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button