Belagavi NewsBelgaum NewsKarnataka NewsLatestPolitics

*ಬೆಳಗಾವಿ ಡಿಹೆಚ್ ಒ ಡಾ.ಈಶ್ವರ ಗಡಾದಗೆ ಜಿಲ್ಲಾಡಳಿತದಿಂದ ಶೋಕಾಸ್ ನೋಟಿಸ್ ಜಾರಿ*

ಪ್ರಗತಿವಾಹಿನಿ ಸುದ್ದಿ: ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ವಿಐಪಿ ಶಿಷ್ಟಾಚಾರ ಹಾಗೂ ವೈದ್ಯಕೀಯ ಭದ್ರತಾ ಲೋಪವಾಗಿರುವ ಆರೋಪ ಕೇಳಿ ಬಂದಿದ್ದು. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಗಡಾದ ಅವರಿಗೆ ಜಿಲ್ಲಾಡಳಿತ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಸಿಎಂ ಡಿ.ಕೆ.ಶಿವಕುಮಾರ್ ಜುಲೈ 9ರಂದು ಬೆಳಗಾವಿಯಲ್ಲಿ ನಡೆದ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದರು. ಪ್ರವಾಸದ ವೇಳೆ ಸರ್ಕಾರದ ಸ್ಪಷ್ಟ ನಿರ್ದೇಶನಗಳಿದ್ದರೂ ಕರ್ತವ್ಯ ಲೋಪ ಎಸಗಿರುವುದು ಬೆಳಕಿಗೆ ಬಂದಿದೆ.

ಸರ್ಕಾರದ ನಿಯಮಾವಳಿ ಪ್ರಕಾರ ಸಿಎಂ ಪ್ರವಾಸದಲ್ಲಿದ್ದಾಗ ಅತ್ಯಾಧುನಿಕ ಜೀವ ರಕ್ಷಕ ಉಪಕರಣಗಳಿರುವ ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ALS) ಅಂಬುಲೆನ್ಸ್‌ ಹಾಗೂ ತಜ್ಞ ವೈದ್ಯರ ತಂಡವನ್ನು ಕಡ್ಡಾಯವಾಗಿ ನೇಮಿಸಬೇಕಿತ್ತು. ಆದರೆ ಡಿಹೆಚ್‌ಒ ಕೇವಲ ಸಾಮಾನ್ಯ ಅಂಬುಲೆನ್ಸ್‌ ನಿಯೋಜಿಸಿ ಮುಖ್ಯಮಂತ್ರಿಗಳ ಆರೋಗ್ಯ ಭದ್ರತೆ ಜೊತೆ ಚೆಲ್ಲಾಟವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಿಎಂ ವಾಸ್ತವ್ಯ ಹೂಡಿದ್ದ ಸ್ಥಳದಲ್ಲಿ ಹಿರಿಯ ತಜ್ಞ ವೈದ್ಯರನ್ನು ಕರ್ತವ್ಯಕ್ಕೆ ಹಾಕುವ ಬದಲು, ಪಿಜಿ (ವೈದ್ಯಕೀಯ ಸ್ನಾತಕೋತ್ತರ) ವಿದ್ಯಾರ್ಥಿಗಳನ್ನು ನೇಮಿಸಿ ಪ್ರೋಟೋಕಾಲ್ ಉಲ್ಲಂಘಿಸಲಾಗಿತ್ತು. ಪ್ರವಾಸದ ಅವಧಿಯಲ್ಲಿ ವೈದ್ಯಕೀಯ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರದೆ ಹಾಗೂ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ.

ಪರಿಶೀಲನೆಯ ವೇಳೆ ಮುಖ್ಯಮಂತ್ರಿಗಳ ಸುರಕ್ಷತೆಗೆ ಅಗತ್ಯವಿದ್ದ ಕನಿಷ್ಠ ಸೌಲಭ್ಯಗಳನ್ನೂ ಒದಗಿಸದೇ ಇರುವುದು ಸ್ಪಷ್ಟವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು 7 ದಿನಗಳ ಒಳಗೆ ಸೂಕ್ತ ಹಾಗೂ ಸಮರ್ಪಕ ವಿವರಣೆ ನೀಡದಿದ್ದರೆ, ಸೇವೆಯಿಂದ ಅಮಾನತು ಸೇರಿದಂತೆ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button