Kannada NewsLatestWorld

*ಉಕ್ರೇನ್ ಹಡಗಿನ ಮೇಲೆ ರಷ್ಯಾ ದಾಳಿ: ಕಾಸರಗೋಡು ಮೂಲದ ವ್ಯಕ್ತಿ ಸೇರಿ ನಾಲ್ವರು ಭಾರತೀಯರು ಸಾವು*

ಪ್ರಗತಿವಾಹಿನಿ ಸುದ್ದಿ: ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಮುಂದುವರೆದಿದ್ದು, ಉಕ್ರೇನ್ ಹಡಗಿನ ಮೇಲೆ ರಷ್ಯಾ ದಾಳಿ ನಡೆಸಿದೆ. ಘಟನೆಯಲ್ಲಿ ಕಾಸರಗೋಡು ಮೂಲದ ವ್ಯಕ್ತಿ ಸೇರಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.

Home add -Advt

ಉಕ್ರೇನ್‌ನ ಒಡೆಸ್ಸಾ ಬಂದರಿನ ಸಮೀಪ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ರಷ್ಯಾ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಭಾರತೀಯ ಪ್ರಜೆಗಳು ಮೃತಪಟ್ಟಿದ್ದಾರೆ. ಈ ಘಟನೆಯನ್ನು ಭಾರತ ಸರ್ಕಾರ ಖಂಡಿಸಿದೆ. ದಾಳಿಗೊಳಗಾದ ಹಡಗನ್ನು ‘ಎಮ್.ವಿ. ಗೋಲ್ಡನ್ ಲಿಯೋ’ ಎಂದು ಗುರುತಿಸಲಾಗಿದೆ. ಈ ಘಟನೆಯ ಸಮಯದಲ್ಲಿ ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದರು. ಅವರಲ್ಲಿ ಐವರು ಭಾರತೀಯರಾಗಿದ್ದರು.

“ಉಕ್ರೇನ್‌ನಲ್ಲಿರುವ ನಮ್ಮ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ದಾಳಿಯಿಂದ ತೊಂದರೆಗೆ ಒಳಗಾದವರಿಗೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ಹಾಗೂ ಆಡಳಿತಾತ್ಮಕ ಸಹಾಯವನ್ನು ಒದಗಿಸಲು ನಿರಂತರ ಶ್ರಮಿಸುತ್ತಿದೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಹಾಗೇ, ವಿದೇಶಾಂಗ ಸಚಿವಾಲಯವು ಮೃತರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಗಾಯಗೊಂಡಿರುವ ನಾವಿಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.

ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಈ ಹಿಂಸಾಚಾರವನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ನಾಗರಿಕ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದು ಮತ್ತು ಅವರ ಜೀವಕ್ಕೆ ಆಪತ್ತು ತರುವುದು ತೀವ್ರ ಖಂಡನೀಯ ಎಂದು ಭಾರತ ಹೇಳಿದೆ. ಮುಕ್ತ ಸಮುದ್ರಯಾನದ ಸ್ವಾತಂತ್ರ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಅಡ್ಡಿಪಡಿಸುವ ಇಂತಹ ಕೃತ್ಯಗಳು ಅತ್ಯಂತ ವಿಷಾದಕರವಾಗಿದ್ದು, ಇಂತಹ ದಾಳಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಚಿವಾಲಯವು ತನ್ನ ಅಧಿಕೃತ ಹೇಳಿಕೆಯಲ್ಲಿ ಹೇಳಿದೆ.

Related Articles

Back to top button