ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಸರ್ಕಾರಿ ಅಭಿಯೋಜಕರು ಹಾಗೂ ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳಿಗೆ ಪ್ರಾಥಮಿಕ ಪರೀಕ್ಷೆಗಳು ನಡೆಯಲಿದ್ದು, ಬೆಳಗಾವಿ ನಗರದ ಟಿಳಕವಾಡಿಯ ಗೋಗಟೆ ಪಿ.ಯು ಕಾಲೇಜ, ಗೋವಿಂದರಾಮ ಸೇಕಸರಿಯಾ ಪಿ.ಯು ಸೈನ್ಸ್ ಕಾಲೇಜ, ಚವ್ಹಾಟಗಲ್ಲಿಯ ಮರಾಠಾ ಮಂಡಳ ಪಿ.ಯು ಕಾಲೇಜ ಹಾಗೂ ಟಿಳಕವಾಡಿಯ ರಾಣಿ ಪಾರ್ವತಿ ದೇವಿ ಆರ್ಟ್ಸ ಮತ್ತು ಕಾಮರ್ಸ್ ಪಿ.ಯು ಕಾಲೇಜ ಸೇರಿದಂತೆ ಒಟ್ಟು 4 ಪರೀಕ್ಷಾ ಕೇಂದ್ರಗಳಲ್ಲಿ ರವಿವಾರ (ಮಾ.28) ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಗಳು ನಿಷ್ಪಕ್ಷಪಾತವಾಗಿ ಹಾಗೂ ಯಾವುದೇ ಅಡೆತಡೆಗಳಿಲ್ಲದೇ ನಡೆಯುವಂತೆ ನೋಡಿಕೊಳ್ಳಲು, ಪರೀಕ್ಷೆಗಳ ಸಮಯಕ್ಕೆ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ ಸೇರುವ ಸಾಧ್ಯತೆ ಇರುವುದರಿಂದ ಪರೀಕ್ಷೆಗಳ ಸಮಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಪ್ರತಿಯೊಂದು ಪರೀಕ್ಷಾ ಕೇಂದ್ರದ ಸುತ್ತಲು 200 ಮೀಟರ್ ಸುತ್ತಳತೆಯಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಸೇರುವದನ್ನು ನಿಷೇಧಿಸಿ ಕಲಂ 144 ಸಿ.ಆರ್.ಪಿ.ಸಿ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಪರೀಕ್ಷೆಗಳ ಆರಂಭದಿಂದ ಮುಕ್ತಾಯವಾಗುವ ವರೆಗೆ ನಿಷೇಧಾಜ್ಞೆಯ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಲು 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಪರೀಕ್ಷಾ ಕೇಂದ್ರದ ಸುತ್ತಲು ಶಸ್ತ್ರ , ಬಡಿಗೆ, ಬರ್ಚಿ, ಖಡ್ಗ, ಗಧೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕೂ, ಸ್ಫೋಟಕ ವಸ್ತು ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಲು ಉಪಯೋಗಿಸಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಸುತ್ತಾಡುವುದು, ಪರೀಕ್ಷಾ ಕೇಂದ್ರದ ಸುತ್ತಲು ಬಹಿರಂಗವಾಗಿ ಘೋಷಣೆ ಕೂಗುವುದು, ವಾದ್ಯ ಬಾರಿಸುವುದು, ಸನ್ನೆ ಅಥವಾ ನಕಲ ಪ್ರದರ್ಶನ ಹಾಗೂ ಸಾರ್ವಜನಿಕ ಸಭ್ಯತೆ, ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಪರೀಕ್ಷೆ ನಡೆಯುವ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲು 200 ಮೀಟರ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ದಂಡ ಪ್ರಕ್ರಿಯ ಸಂಹಿತೆ (ಸಿ.ಆರ್.ಪಿ.ಸಿ 1973) ಕಲಂ 20 ಮತ್ತು 144 ರ ಪ್ರಕಾರ ಬೆಳಗಾವಿ ನಗರದ ಹೆಚ್ಚುವರಿ ಜಿಲ್ಲಾದಂಡಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್ ಅವರು ನಿಷೇದಾಜ್ಞೆ ಜಾರಿ ಆದೇಶ ಹೊರಡಿಸಿರುತ್ತಾರೆ.
ಈ ನಿಷೇದಾಜ್ಞೆ ಅಂತ್ಯಕ್ರಿಯೆ ಮೆರವಣಿಗೆಗಳಿಗೆ ಮತ್ತು ಇನ್ನಿತರ ಕಾರಣಗಳಿಗಾಗಿ ಅನುಮತಿ ಪಡೆದ ಮೆರವಣಿಗೆಗಳಿಗೆ ಅನ್ವಯಿಸುವದಿಲ್ಲ.
ಸದರಿ ಆಜ್ಞೆಯನ್ನು ಉಲ್ಲಂಘಿಸುವವರ ವಿರುದ್ದ ಕಲಂ 188 ಭಾರತೀಯ ದಂಡ ಸಂಹಿತೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ