ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗೆಳೆಯರ ಬಳಗದಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ 35ನೇ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು ಉದ್ಘಾಟಕರಾಗಿ ಭಾಗವಹಿಸಿದ್ದರು.
ಕರ್ನಾಟಕದ ಏಕೀಕರಣಕ್ಕಾಗಿ ಅಂಕಲಿಯಲ್ಲಿಯೂ ಸಭೆಯು ನಡೆದಿತ್ತು. ಅಂದಿನ ಕಾಲದಲ್ಲಿ ಕನ್ನಡದ ಶಾಲೆಯನ್ನು ಗಡಿಭಾಗದಲ್ಲಿ ಪ್ರಾರಂಭಿಸಿದ ಶ್ರೇಯಸ್ಸು ಕೋರೆ ಮನೆತನಕ್ಕೆ ಸಲ್ಲುತ್ತದೆ. ಅಖಂಡ ಕರ್ನಾಟಕದ ಉಳಿವಿಗಾಗಿ ನಾವೆಲ್ಲರೂ ಸದಾ ಕಟಿಬದ್ಧರಾಗಿರಬೇಕು ಹಾಗೂ ಪ್ರಾದೇಶಿಕವಾಗಿ ಹಂಚಿಹೋದ ಕನ್ನಡದ ಎಲ್ಲ ಮನಸ್ಸುಗಳು ಒಂದುಗೂಡಬೇಕು ಎಂದು ಹೇಳಿದರು. ಮುಂದುವರೆದು ಗಡಿಭಾಗದಲ್ಲಿರುವ ಗಡಿ ಕನ್ನಡಿಗರ ಸಮಸ್ಯೆಗಳಿಗೆ ಸೂಕ್ತವಾದ ಸ್ಪಂದನೆ ಸಿಗಬೇಕಾಗಿದೆ ಎಂದು ಕೋರೆ ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರನಟರಾದ ರಾಮಕೃಷ್ಣರವರು ಮಾತನಾಡಿ ಗಡಿಭಾಗದಲ್ಲಿ ಕನ್ನಡದ ದೀಪವನ್ನು ಬೆಳಗಿಸಿದ ಯಕ್ಸಂಬಾದ ಗೆಳೆಯರ ಬಳಗದ ಅಧ್ಯಕ್ಷರು, ಗಡಿನಾಡಿನ ಸಾಹಿತಿಗಳು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಡಾ.ಅನಿಲ ಕಮತಿ ಅವರ ಕನ್ನಡದ ಸೇವೆ ಹಾಗೂ ಗಡಿಜನರ ಕನ್ನಡದ ಪ್ರೀತಿ ಪ್ರಶಂಸನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು ಮಾತನಾಡುತ್ತಾ ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡವನ್ನು ಇನ್ನಷ್ಟು ಗಟ್ಟಿಗೊಳಿಸಿ, ಕನ್ನಡಿಗರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ, ಕನ್ನಡಿಗರ ಏಳಿಗೆಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮಿಯವರು ಗಡಿಭಾಗದಲ್ಲಿಯ ಕನ್ನಡಕ್ಕಾಗಿ ಅನೇಕ ಕಲಾವಿದರು, ಸಾಹಿತಿಗಳು, ಚಿಂತಕರು, ಹೋರಾಟಗಾರರು ತಮ್ಮ ಸೇವೆ ಸಲ್ಲಿಸಿದ್ದಾರೆಂದು ಹೇಳಿದರು. ಡಾ.ಪ್ರಭಾಕರ ಕೋರೆಯವರು ಕನ್ನಡಕ್ಕಾಗಿ ಸಲ್ಲಿಸಿದ ಅವರ ಸೇವೆಯನ್ನು ಪರಿಗಣಿಸಿ ಅವರನ್ನು ಸಮಾರಂಭದಲ್ಲಿ ಸತ್ಕರಿಸಲಾಯಿತು. ಸಾಹಿತಿಗಳಾದ ಶೃತಿ ಹೆಗ್ಗೆಯವರ ಪ್ರಥಮ ಕವನ ಸಂಕಲನವಾದ “ಬಣ್ಣದ ಗರಿ” ಎಂಬ ಕವನ ಸಂಕಲನವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಗೆಳೆಯರ ಬಳಗದ ಸದಸ್ಯರಾದ ವಿಜಯ ದಾನವಾಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳು, ಗಣ್ಯರು ಹಾಗೂ ಕನ್ನಡ ಪ್ರೇಮಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಂಡಿಗಣಿ ದಾನೇಶ್ವರ ಮಹಾರಾಜರ ಕಾರ್ಯ ಪ್ರಶಂಸನೀಯ : ಶಾಸಕ ಬಾಲಚಂದ್ರ ಜಾರಕಿಹೊಳಿ
https://pragati.taskdun.com/politics/balachandra-jarakiholibandigani-mathakalloli/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ