Kannada NewsLatest

ಸೋಯಾಅವರೆಯ ಬಿತ್ತನೆಗೆ ಸಲಹೆಗಳು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೃಷಿ ಇಲಾಖೆಯು ಸೋಯಾಅವರೆ ಬೆಳೆಯುವ ರೈತರಿಗೆ ಬಿತ್ತನೆ ಸಲಹೆಗಳನ್ನು ಸೂಚಿಸಿದೆ. ಬಿತ್ತನೆಗಾಗಿ ಪ್ರಮಾಣಿತ ಬಿತ್ತನೆ ಬೀಜಗಳನ್ನೇ ಬಳಸಿ ಅಥವಾ ರೈತರು ಕಳೆದ ವರ್ಷದಲ್ಲಿ ತಾವೇ ಬೆಳೆದ ಬೀಜಗಳ ಮೊಳಕೆ ಪ್ರಮಾಣವನ್ನು ಪರೀಕ್ಷಿಸಿ ಬಿತ್ತನೆ ಮಾಡುವುದು ಉತ್ತಮ ಎಂದಿದೆ.

ಮಳೆಯಾಶ್ರಿತ ಸೋಯಾಅವರೆ ಬೆಳೆಯನ್ನು ಜೂನ್ ಮೊದಲನೆ ವಾರದಿಂದ ಜುಲೈ ಮಧ್ಯದವರೆಗೆ ಬಿತ್ತನೆ ಮಾಡಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ್ ತಿಳಿಸಿದ್ದಾರೆ.

ಮಣ್ಣಿನ ತೇವಾಂಶದ ಬಗ್ಗೆ ಗಮನವಿರಲಿ:

ಸಾಕಷ್ಟು ಹಸಿ ಮಳೆಯಾದ ನಂತರ ಮಣ್ಣಿನ ತೇವಾಂಶದ ಹದ ನೋಡಿಕೊಂಡು ಸೋಯಾಅವರೆ ಬೀಜವನ್ನು ಬಿತ್ತನೆ ಮಾಡಬೇಕು. ಸಾಕಷ್ಟು ಹಸಿ ಮಳೆಯಾಗದ ಪ್ರದೇಶದಲ್ಲಿ ಮಣ್ಣಿನ ತೇವಾಂಶ ಕೊರತೆ ಇದ್ದಲ್ಲಿ ಸೋಯಾಅವರೆ ಬೀಜವನ್ನು ಬಿತ್ತನೆ ಮಾಡಬಾರದು. ಒಂದು ವೇಳೆ ಬಿತ್ತನೆ ಮಾಡಿದಲ್ಲಿ ಮೊಳಕೆಯಾಗದಿರಬಹುದು ಅಥವಾ ಕಡಿಮೆ ಪ್ರಮಾಣದಲ್ಲಿ ಮೊಳಕೆಯಾಗಬಹುದು.

ನೀರಾವರಿ ಪ್ರದೇಶದಲ್ಲಿ ಭೂಮಿಗೆ ಮೊದಲು ನೀರನ್ನು ಹಾಯಿಸಿ ಮಣ್ಣಿನ ಉಷ್ಣಾಂಶ ಕಡಿಮೆಯಾದ ನಂತರ ತೇವಾಂಶದ ಹದ ನೋಡಿಕೊಂಡು ಬೀಜವನ್ನು ಬಿತ್ತನೆ ಮಾಡುವುದು ಸೂಕ್ತವಾಗಿರುತ್ತದೆ. ಯಾವುದೇ ಕಾರಣಕ್ಕೂ ಒಣ ಬಿತ್ತನೆ ಮಾಡಿ ನೀರನ್ನು ಹಾಯಿಸಬಾರದು. ಇದರಿಂದ ಬೀಜ ಮೊಳಕೆ ಬರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ್ ತಿಳಿಸಿದ್ದಾರೆ.

30 ಸೆ.ಮೀ. ಅಂತರದಲ್ಲಿ ಬಿತ್ತನೆ‌ ಸೂಕ್ತ:

ಸೋಯಾಅವರೆಯನ್ನು ಸಾಲಿನಿಂದ ಸಾಲಿಗೆ 30 ಸೆ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು ಹಾಗೂ ಒಂದು ಎಕರಗೆ 30 ಕೆ.ಜಿ ಬಿತ್ತನೆ ಬೀಜವನ್ನು ಬಿತ್ತುವುದು ಸೂಕ್ತವಾಗಿರುತ್ತದೆ. ಸೋಯಾಅವರೆ ಬೀಜವನ್ನು 3 ಇಂಚಿಗಿಂತ ಕೆಳಗೆ ಬಿತ್ತನೆ ಮಾಡಬಾರದು. ಹೀಗೆ ಬಿತ್ತನೆ ಮಾಡಿದ ಸಂದರ್ಭದಲ್ಲಿ ಮೊಳಕೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದ ಲಕ್ಷ್ಮಿ ಹೆಬ್ಬಾಳಕರ್  

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button