ಪ್ರಗತಿವಾಹಿನಿ ಸುದ್ದಿ; ಗೋಕಾಕ: ಪೆಟ್ರೋಲ್, ಡೀಸೆಲ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಗೋಕಾಕ್ ನಲ್ಲಿ ನಾಳೆ ಪ್ರತಿಭಟನೆ ನಡೆಯಲಿದ್ದು, ನಾನು ಕೂಡ ಭಾಗವಹಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ದಿನ ತೈಲ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ, ಪಕ್ಷದಿಂದ ದೇಶಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. ಗೋಕಾಕನ ಪೆಟ್ರೋಲ್ ಬಂಕ್ ಎದುರು ನಾಳೆ ಪ್ರತಿಭಟನೆ ನಡೆಸಲಾಗುತ್ತಿದ್ದು, ನಾನು ಕೂಡ ಪಾಲ್ಗೊಳ್ಳುತ್ತಿದ್ದೇನೆ ಎಂದರು.
ಅಧಿಕಾರದಲ್ಲಿದ್ದವರು ಬಾಯ್ಬಿಡುತ್ತಿಲ್ಲ:
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಬೆಲೆ 1 ರೂಪಾಯಿ ಹೆಚ್ಚು ಮಾಡಿದರು ಕೂಡ ಇಂದಿನ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸೇರಿ ಈಗ ಅಧಿಕಾರದಲ್ಲಿರುವ ಎಲ್ಲ ಬಿಜೆಪಿ ನಾಯಕರು ದೇಶಾಧ್ಯಂತ ಪ್ರತಿಭಟನೆ ಮಾಡುತ್ತಿದ್ದರು. ಆದರೆ, ಇಂದು ಅವರೇ ಸರ್ಕಾರದಲ್ಲಿದ್ದರು ಕೂಡ ಈ ಬಗ್ಗೆ ಏನು ಮಾತನಾಡಲು ತಯಾರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೈಲ ಬೆಲೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಗಮನ ಸೆಳೆಯಲು ಪಕ್ಷದ ವತಿಯಿಂದ ಇಂದು ಜಿಲ್ಲಾ ವ್ಯಾಪ್ತಿಯಲ್ಲಿ, ನಾಳೆ ತಾಲೂಕು ವ್ಯಾಪ್ತಿ, ನಾಡಿದ್ದು ಜಿಲ್ಲಾ ಪಂಚಾಯ್ತಿ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಹಂತಹಂತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜನರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ:
ವಿರೋಧ ಪಕ್ಷವಾಗಿ ನಾವು ಪ್ರತಿಭಟನೆ ಮಾಡೇ ಮಾಡುತ್ತೇವೆ. ಜನರು ಕೂಡ ಪ್ರತಿಭಟನೆಯಲ್ಲಿ ಸ್ವಯಂ ಪ್ರೇರಿರತರಾಗಿ ಭಾಗವಹಿಸಬೇಕು. ತಮ್ಮ ಧ್ವನಿ ಎತ್ತಬೇಕು. ಅಂದಾಗ ಮಾತ್ರ ಸರ್ಕಾರಕ್ಕೆ ಸಂದೇಶ ಹೋಗುತ್ತದೆ. ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದರಿಂದ ಜನಸಾಮಾನ್ಯರೂ ಹೋರಾಟ ಮಾಡಬೇಕು. ಅಂದಾಗ ಸರ್ಕಾರ ಬೆಲೆ ಇಳಿಕೆ ಮಾಡಲು ಮುಂದಾಗುತ್ತದೆ ಎಂದು ಹೇಳಿದರು.
ಲಾಕ್ ಡೌನ್ ಶೀಘ್ರ ತೆರವುಗೊಳಿಸಲಿ:
ಈಗಾಗಲೇ ಕೊರೊನಾ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ, ಲಾಕ್ ಡೌನ್ ಅವಶ್ಯಕತೆ ಇರಲಿಲ್ಲ. ಜನಸಾಮಾನ್ಯರ ಅನುಕೂಲದ ದೃಷ್ಟಿಯಿಂದ ಕೆಲವೊಂದಿಷ್ಟು ಸಡಿಲಿಕೆಯನ್ನು ಮಾಡಬೇಕಿತ್ತು. ಪ್ರತಿದಿನ 100, 200 ಕೇಸ್ ಗಳು ಇದ್ದೇ ಇರುತ್ತವೆ. ಇದನ್ನು ನಾವು ಹಂತ ಹಂತವಾಗಿ ಚಿಕಿತ್ಸೆಯಿಂದ ನಿಯಂತ್ರಣ ಮಾಡಬೇಕಾಗುತ್ತದೆ. ಹೀಗಾಗಿ, ಆದಷ್ಟು ಬೇಗ ಲಾಕ್ ಡೌನ್ ಸಂಪೂರ್ಣವಾಗಿ ತೆರವುಗೊಳಿಸಬೇಕು ಎಂದು ಪತ್ರಕರ್ತರ ಪ್ರಶ್ನೆಗೆ ಸತೀಶ ಪ್ರತಿಕ್ರಿಯಿಸಿದರು.
ವಿರೋಧಿ ಬಣಕ್ಕೆ ಸಿಎಂ ಖಡಕ್ ತಿರುಗೇಟು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ