Kannada NewsLatest

ಸೆ.22 ರ ಒಳಗೆ ರಸ್ತೆ, ಸೇತುವೆ ಕಾಮಗಾರಿ ಪ್ರಾರಂಭಿಸಿ: ಗೋವಿಂದ ಕಾರಜೋಳ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಳೆ ಮತ್ತು ಪ್ರವಾಹದಿಂದ ಹಾಳಾಗಿರುವ ಸೇತುವೆ ಹಾಗೂ ರಸ್ತೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರುಗಳ ಗಮನಕ್ಕೆ ತಂದು ಸೆ‌.22ರ ಒಳಗಾಗಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಲಯ ಮಟ್ಟದ ಯೋಜನೆಗಳ ಬಗ್ಗೆ ಮತ್ತು ಪ್ರವಾಹ ಹಾನಿ ತಡೆಗಟ್ಟುವ ಕುರಿತು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುವರ್ಣವಿಧಾನಸೌಧದಲ್ಲಿ ಶುಕ್ರವಾರ(ಸೆ.4) ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೆ.22 ರ ಒಳಗಾಗಿ ಬೆಳಗಾವಿ ಮತ್ತು ಧಾರವಾಡ ವಲಯದ ರಸ್ತೆ ಹಾಗೂ ಸೇತುವೆಗಳ ಕಾಮಗಾರಿಗಳು ಪ್ರಾರಂಭಗೊಳ್ಳಬೇಕು. ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್ ನೋಟಿಫಿಕೇಷನ್ ಹೊರಡಿಸಬೇಕು. ಟಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು.

ಬೆಳಗಾವಿ ವಲಯದ 74 ಕೆಲಸಗಳಿಗೆ ಬೇಕಾಗುವ ದಾಖಲಾತಿಗಳುನ್ನು ಸಿದ್ದ ಪಡಿಸಿಕೊಂಡು ಟೆಂಡರ್ ಬಿಡುಗಡೆ ಮಾಡಬೇಕು. ಚಿಕ್ಕೋಡಿ ವಲಯದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಾಳೆ ವರೆಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಹಾಳಾಗಿರುವ ರಸ್ತೆ ಮತ್ತಿತರ ಮೂಲಸೌಕರ್ಯಗಳ ದುರಸ್ತಿಗೆ ಅಗತ್ಯವಿರುವ ಕೆಲಸಗಳಿಗೆ ಅಂದಾಜು ಮೊತ್ತದ ಬಗ್ಗೆ ವರದಿ ತಯಾರಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಮಳೆ ಮತ್ತು ಪ್ರವಾಹ ಪ್ರವಾಹದಿಂದ ಹಾನಿಯಾಗಿರುವ ಮೂಲಸೌಕರ್ಯಗಳನ್ನು ಸರಿಪಡಿಸುವ ಕಾಮಗಾರಿಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವರಾದ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು. ಮಳೆಯಿಂದ ಹಾಗೂ ಪ್ರವಾಹದಿಂದ ಹಾನಿಯಾದ ರಸ್ತೆ ಮತ್ತು ಕಟ್ಟಡಗಳ ಬಗ್ಗೆ ಅಧಿಕಾರಿಗಳು ಸಚಿವರಿಗೆ ವಿವರಿಸಿದರು.

ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್,  ಕಿತ್ತೂರು ಮತ ಕ್ಷೇತ್ರದ ಯರಡಾಲ ಕ್ರಾಸ್ – ಎಂ.ಕೆ. ಹುಬ್ಬಳ್ಳಿ, ಚಿಕ್ಕಬಾಗೇವಾಡಿ – ಎಂ.ಕೆ ಹುಬ್ಬಳ್ಳಿ, ಕರಡಿಗುದ್ದಿ- ಸಂಪಗಾಂವ, ಸಂಪಗಾಂವ- ಪಟ್ಟಿಹಾಳ ನಡುವಿನ ಸೇತುವೆ, ಹೂಲಿಕಟ್ಟಿ – ಕೊಟಬಾಗಿ ರಸ್ತೆ, ಹಾಗೂ ಇನ್ನೂ  ಅನೇಕ ಹಾಳಾದ ರಸ್ತೆಗಳ ಬಗ್ಗೆ ಮನವಿ ಸಲ್ಲಿಸಿ ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಿದರು.

ಮುಖ್ಯ ಅಭಿಯಂತರ ಎಸ್.ಎಫ್.ಪಾಟೀಲ್ ಸೇರಿದಂತೆ ಗದಗ, ಬಾಗಲಕೋಟೆ, ಧಾರವಾಡ, ಕಾವೇರಿ, ಕಾರವಾರ ಹಾಗೂ ಶಿರಸಿ ವಿಭಾಗಗಳ ಲೋಕೋಪಯೋಗಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button