*ಪತ್ನಿ ಮಕ್ಕಳಿದ್ದರೂ ಪರಸ್ತ್ರೀ ಸಹವಾಸ: ಹೆಂಡತಿ ಬಿಟ್ಟು ವಿವಾಹಿತಳೊಂದಿಗೆ ಓಡಿಹೋದ ಪತಿ; ನ್ಯಾಯಕ್ಕಾಗಿ ಠಾಣೆಯ ಮುಂದೆ ಧರಣಿ ಕುಳಿತ ಗ್ರಾಮ ಪಂಚಾಯಿತಿ ಸದಸ್ಯೆ*
ಪ್ರಗತಿವಾಹಿನಿ ಸುದ್ದಿ: ಪತ್ನಿ ಮಕ್ಕಳಿದ್ದರೂ ಪರಸ್ತ್ರೀ ಸಹವಾಸ ಮಾಡಿರುವ ಪತಿಗಾಗಿ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬಳು, ನ್ಯಾಯ ಕೇಳುತ್ತಿದ್ದು, ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮಾರಿಹಾಳದಲ್ಲಿ ನಡೆದಿದೆ.
ಮಾರಿಹಾಳ ಗ್ರಾಮ ಪಂಚಾಯಿತಿ ಸದಸ್ಯೆ ವಾಣಿಶ್ರೀ ಮಾರಿಹಾಳ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ್ದಾರೆ. ನನಗೆ ನಮ್ಮ ಪತಿ ಹಾಗೂ ಮಕ್ಕಳು ಬೇಕು. ನ್ಯಾಯ ಕೊಡಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ವಾಣಿಶ್ರೀ ಪತಿ ಬಸವರಾಜ್ ಎಂಬಾತ ಮುಸಾಬಿ ಎಂಬ ವಿವಾಹಿತ ಮಹಿಳೆಯ ಜೊತೆಗೆ ಓಡಿ ಹೋಗಿದ್ದಾನೆ. ಪೊಲೀಸ್ ಠಾಣೆ ಮುಂದೆ ಕಣ್ನೀರಿಟ್ಟಿರುವ ವಾಣಿಶ್ರೀ, ತನ್ನ ಪತಿ ವಿವಾಹಿತ ಮಹಿಳೆಯೊಂದಿಗೆ ಕಳೆದ 25 ದಿನಗಳ ಹಿಂದೆ ಓಡಿಹೋಗಿದ್ದಾನೆ. ಆಕೆ ಪತಿಯನ್ನು ಬಿಟ್ಟು ಬಂದು, ತನ್ನ ಪತಿಯನ್ನು ಕರೆದೊಯ್ದಿದ್ದಾಳೆ. ನಾನು ನನ್ನ ಪತಿಯನ್ನು ಬಿಟ್ಟುಕೊಡಲು ಸಿದ್ಧಳಿಲ್ಲ. ಮುಸಾಬಿ ಜೊತೆ ಓಡಿಹೋಗಿರುವ ಪತಿ ಬಸವರಾಜ್ ನಿನ್ನೆ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಪೊಲೀಸ್ ಠಾಣೆಗೆ ದೂರು ನೀಡಲು ಬಂದರೆ ಪೊಲೀಸರು ದೂರು ಸ್ವೀಕರಿಸದೇ, ಸರಿಯಾಗಿ ಸ್ಪಂದಿಸದೇ ಕಳುಹಿಸುತ್ತಿದ್ದಾರೆ. ಏನೇ ಆದರೂ ನನಗೆ ನ್ಯಾಯ ಸಿಗಲೇಬೇಕು ಎಂದು ಠಾಣೆಯೇ ಮುಂದೆ ಧರಣಿ ನಡೆಸುತ್ತಿದ್ದೇನೆ ಎಂದು ಗೋಗರೆದಿದ್ದಾರೆ.
ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಡಿರುವ ಮಹಿಳೆ ಮುಸಾಬಿ, ತಾನು ಹಾಗೂ ಬಸವರಾಜ್ ಇಷ್ಟಪಟ್ಟೇ ಬಂದಿದ್ದೇವೆ. ಆತ ಹಲವು ದಿನಗಳಿಂದ ತನ್ನನ್ನು ಪ್ರೀತಿಸುತ್ತಿದ್ದ. ಹಾಗಾಗಿ ತಾನು ಪತಿಯನ್ನು ಬಿಟ್ಟು ಬಸವರಾಜ್ ಜೊತೆ ಬಂದಿದ್ದೇನೆ. ಈಗ ಆತ ತನ್ನನ್ನು ಮಧ್ಯದಾರಿಯಲ್ಲಿ ಕೈಕೊಟ್ಟರೆ ಹೇಗೆ? ಹಾಗಾಗಿ ತನ್ನ ಜೊತೆ ಇರುವಂತೆ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಆತನನ್ನು ಬಿಟ್ಟುಕೊಡಲ್ಲ ಎಂದಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ