*ಮದುವೆ ಸಮಾರಂಭದಲ್ಲಿ ಊಟ ಮಾಡಿ ಅಸ್ವಸ್ಥರಾಗಿದ್ದ ಪ್ರಕರಣ; ಫುಡ್ ಪಾಯಿಸನ್ ನಿಂದ ದೃಷ್ಟಿಯನ್ನೇ ಕಳೆದುಕೊಂಡ ವ್ಯಕ್ತಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮದುವೆ ಸಮಾರಂಭದಲ್ಲಿ ಊಟ ಮಾಡಿದ್ದ ಗ್ರಾಮಸ್ಥರಲ್ಲಿ ನೂರಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಬಳಲುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವ ವ್ಯಕ್ತಿ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಹಿರೇಕೋಡಿ ಗ್ರಾಮದ ಹೊರವಲಯದಲ್ಲಿ ಪಟೇಲ್ ಕುಟುಂಬದ ಮದುವೆ ಸಮರಂಭದಲ್ಲಿ ಊಟ ಮಾಡಿ ಮನೆಗೆ ವಾಪಸ್ ಆಗಿದ್ದ ನೂರಾರು ಜನರು ವಾಂತಿ ಭೇದಿಯಿಂದ ತೀವ್ರ ಅಸ್ವಸ್ಥರಾಗಿದ್ದರು. ಅಸ್ವಸ್ಥರಾದ ಹಲವರು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ವಸ್ಥರಾಗಿದ್ದ ವ್ಯಕ್ತಿಯೋರ್ವ ಫುಡ್ ಪಾಯಿಸನ್ ನಿಂದ ದೃಷ್ಟಿಯನ್ನೇ ಕಳೆದುಕೊಂಡಿರುವುದಾಗಿ ಹೇಳಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾಬಾ ಸಾಹೇಬ್ ಬೇಗ್ (37) ದೃಷ್ಟಿ ಕಳೆದುಕೊಂಡವರು. ಮದುವೆ ಸಮರಂಭದಲ್ಲಿ ಭಾಗಿಯಾಗಿ ಊಟ ಮಾಡಿ ಮನೆಗೆ ಬಂದಿದ್ದ ಬಾಬಾ ಸಾಹೇಬ್ ಗೂ ವಾಂತಿ-ಭೇದಿಯಾಗಿದೆ. ಬಳಿಕ ಇದ್ದಕ್ಕಿದ್ದಂತೆ ಕಣ್ಣು ಕಾಣದಂತಾಗಿದೆ ಎಂದು ಹೇಳುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಬಾ ಸಾಹೇಬ್ ರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಬಿಮ್ಸ್ ವೈದ್ಯರು ನೀಡಿದ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ ಬಾಬಾ ಸಾಹೇಬ್ ಎಂಬ ವ್ಯಕ್ತಿ ಅಡ್ಮಿಟ್ ಆಗಿದ್ದು, ಫುಡ್ ಪಾಯಿಸನ್ ಆಗಿ ದೃಷ್ಟಿ ಹೋಗಿದೆ ಎಂದು ಹೇಳಿದ್ದಾರೆ. ಕಣ್ಣು ಫಂಡೋಸ್ಕೋಪಿಕ್ ಮಾಡಿ ನೋಡಿದಾಗ ನಾರ್ಮಲ್ ಇದೆ. ಯಾವ ಕಾರಣಕ್ಕೆ ದೃಷ್ಟಿ ಹೋಗಿದೆ ನಿಖರವಾಗಿ ಗೊತ್ತಾಗಿಲ್ಲ. ನೇತ್ರ ತಜ್ಞರು ಬಾಬಾ ಸಾಹೇಬ್ ರನ್ನು ಪರೀಕ್ಷಿಸಿದ್ದು, ಎಂಆರ್ ಐ ನಡೆಸಲು ಸಲಹೆ ನೀಡಿದ್ದಾರೆ. ಎಂಆರ್ ಐ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ