*ಹನಿಟ್ರ್ಯಾಪ್ ಆರೋಪ; ಮಹಿಳೆಗೆ ಚಪ್ಪಲಿ ಹಾರ ಹಾಕಿ ಮಧ್ಯರಾತ್ರಿ ನಡುರಸ್ತೆಯಲ್ಲಿ ಮೆರವಣಿಗೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಿಳೆಯ ವಿರುದ್ಧ ಹನಿಟ್ರ್ಯಾಪ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಆಕೆಗೆ ಚಪ್ಪಲಿ ಹಾರಹಾಕಿ ಮಧ್ಯರಾತ್ರಿ ನಡುರಸ್ತೆಯಲ್ಲಿ ಮೆರವಣಿಗೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾದ ಮಲ್ಲಾಪುರದಲ್ಲಿ ನಡೆದಿದೆ.
ಮಲ್ಲಾಪುರದ ಮೃತ್ಯುಂಜಯ ಸರ್ಕಲ್ ನಲ್ಲಿ ಸ್ಥಳೀಯ ಮಹಿಳೆಯರು ಹಾಗೂ ಪುರುಷರು ಶ್ರೀದೇವಿ ಎಂಬ ಮಹಿಳೆಗೆ ಚಪ್ಪಲಿ ಹಾರ ಹಾಕಿ ಆಕೆಯನ್ನು ಮಧ್ಯರಾತ್ರಿ ನಡು ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ ಅಲ್ಲದೇ ಆಕೆಯನ್ನು ಕೆಲ ಮಹಿಳೆಯರು ಥಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ. ಮಹಿಳೆ ಶ್ರೀದೇವಿ ವಿರುದ್ಧ ಹನಿಟ್ರ್ಯಾಪ್ ಆರೋಪ ಕೇಳಿಬಂದಿದೆ. ಯುವಕರನ್ನು ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ಮಹಿಳೆಯರು ಹಾಗೂ ಪಿಜಿನಗರ ವಾಸಿಗಳು ಆಕೆ ಮನೆಗೆ ಹೋಗಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆಕೆ ಅವಾಚ್ಯ ಶಬ್ದಳಿಂದ ನಿಂದಿಸಿದ್ದಾಳಂತೆ ಇದರಿಂದ ಕೋಪಗೊಂಡ ಮಹಿಳೆಯರು ಆಕೆಯನ್ನು ಮನೆಯಿಂದ ಹೊರಗೆಳೆದು ತಂದಿದ್ದಾರೆ. ಮಹಿಳೆಯರು, ಕೆಲ ಪುರುಷರು ಸೇರಿ ಆಕೆಗೆ ಚಪ್ಪಲಿ ಹಾರ ಹಾಕಿ ಬೀದಿಯಲ್ಲಿ ಮೆರವಣಿಗೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ಕರೆತಂದು ಒಪ್ಪಿಸಿದ್ದಾರೆ.
ಸಧ್ಯ ಮಹಿಳೆ ಶ್ರೀದೇವಿ ಪೊಲೀಸ್ ವಶದಲ್ಲಿದ್ದು, ಮಹಿಳೆಯನ್ನು ಅಮಾನವೀಯವಾಗಿ ನಡೆಸಿಕೊಂಡವರ ವಿರುದ್ಧವೂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ