ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗಡಿ ಸಾಂಸ್ಕೃತಿಕ ಉತ್ಸವ ಹುಕ್ಕೇರಿ ಹಿರೇಮಠದಲ್ಲಿ ನಡೆಯುತ್ತಿರುವುದು ಅಭಿಮಾನದ ಸಂಗತಿ. ಶ್ರೀಮಠ ಕನ್ನಡದ ಮಠವಾಗಿ ಬೆಳೆದು ನಿಂತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಅವರು ಸೋಮವಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ (ರಿ) ಹಿರೇಮಠ ಹುಕ್ಕೇರಿ ಸಹಯೋಗದಲ್ಲಿ ಭಾರತ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಬೆಳಗಾವಿಯ ಸುತ್ತಮುತ್ತಲಿನ ಜನರಿಗೆ ಕೇವಲ ಭಾಷಣದಿಂದ ಕಾರ್ಯ ಮಾಡುತ್ತಿಲ್ಲ. ಕನ್ನಡಿಗರಿಗೆ ಸಹಾಯ ಹಸ್ತವನ್ನು ಚಾಚುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾದ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದಿಂದ ಆರ್ಥಿಕ ಸಹಾಯ ಮಾಡಿ, ಕರ್ನಾಟಕ ರಾಜ್ಯೋತ್ಸವದಲ್ಲಿ ಹೋಳಿಗೆಯನ್ನು ಉಣಬಡಿಸಿ ಕನ್ನಡದ ಮಠವಾಗಿ ಬೆಳೆದು ನಿಂತಿರುವುದು ಅಭಿಮಾನದ ಸಂಗತಿ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಳಗಾವಿಯಲ್ಲಿ ಕನ್ನಡದ ಕಂಪು ನಿರಂತರವಾಗಿ ನಡೆಯುತ್ತಿರಬೇಕು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗಡಿ ಭಾಗದ ಸಮಸ್ಯೆಯ ಕುರಿತು ಚರ್ಚೆ ನಡೆಯುವ ಕಾರ್ಯ ಮಾಡುವ ಅಗತ್ಯ ಇದೆ ಎಂದರು.
ಡಾ. ಚಂಪಾ, ಬಸವಲಿಂಗಯ್ಯ ಹಿರೇಮಠ ಅವರಿಗೆ ಶೃದ್ಧಾಂಜಲಿ ಅರ್ಪಿಸುವುದರ ಮೂಲಕ ಒಂದು ಜಾನಪದ ಸಂಗೀತದ ದೃವತಾರೆ, ಇನ್ನೊಂದು ಸಾಹಿತ್ಯದ ದೃವತಾರೆ ಅಗಲಿರುವುದು ನಮಗೆ ಅತೀವ ನೋವು ತಂದಿದೆ ಎಂದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಅವರ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಉಳಿದಿದೆ ಎಂದರೆ ಅದಕ್ಕೆ ಮಠಗಳೇ ಕಾರಣ. ಬೆಳಗಾವಿಯಲ್ಲಿ ನಾಗನೂರು ಮಠ, ರುದ್ರಾಕ್ಷಿಮಠ, ಹುಕ್ಕೇರಿ ಹಿರೇಮಠ, ನಿಡಸೋಸಿಯ ಸಿದ್ಧಸಂಸ್ಥಾನ ಮಠ, ಚಿಂಚಲಿಯ ಅಲ್ಲಮಪ್ರಭು ಮಠ, ಅಥಣಿಯ ಮೋಟಗಿಮಠ ಹೀಗೆ ಕನ್ನಡದ ಕೈಂಕರ್ಯ ಮಾಡುತ್ತಿರುವ ಮಠಗಳು ಕನ್ನಡದ ಕಾವಲುಗಾರರಾಗಿ ಸೇವೆ ಸಲ್ಲಿಸುತ್ತಿರುವ ಮಠಾಧೀಶರು ನಮಗೆ ಮಾದರಿಯಾಗಿದ್ದಾರೆ. ಕರ್ನಾಟಕ ಸರಕಾರ ಗಡಿ ಅಭಿವೃದ್ಧಿಗೆ ಇನ್ನು ಹೆಚ್ಚಿನ ಅನುದಾನ ನೀಡಬೇಕು. ವರ್ಷಕ್ಕೆ ಎರಡನೂರು ಕೋಟಿ ಅನುದಾನ ನೀಡಿದರೆ, ಗಡಿಭಾಗವನ್ನು ಅಭಿವೃದ್ಧಿ ಮಾಡಲು ಸಾಧ್ಯ ಎಂದರು.
ಶಾಸಕ ಅನಿಲ್ ಬೆನಕೆ ಮಾತನಾಡಿ, ಬೆಳಗಾವಿಯ ಸುತ್ತಮುತ್ತಲಿನಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಕೆಲ ಕಡಿಗೇಡಿಗಳು ಇಡೀ ವ್ಯವಸ್ಥೆಗೆ ಕೆಟ್ಟು ವ್ಯವಸ್ಥೆ ಮಾಡುತ್ತಿರುವುದು ಖಂಡಿನೀಯ. ನಾವೆಲ್ಲರು ಕನ್ನಡದ ಸೇವೆ ಮಾಡೋಣ. ನಾವು ಕೇವಲ ಕನ್ನಡ ಮಾತನಾಡುವುದು ಅಷ್ಟೆ ಅಲ್ಲ, ಕನ್ನಡದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಮಾಹಿತಿ ಹಕ್ಕು ಆಯೋಗದ ಆಯುಕ್ತೆ ಬಿ.ವಿ.ಗೀತಾ ಮಾತನಾಡಿ, ಕನ್ನಡದ ಉಳಿವಿಗಾಗಿ ಇನ್ನೂ ಹೋರಾಟ ಮಾಡಬೇಕು ಎನ್ನುವುದು ನಮಗೆ ನಾಚಿಗೆ ತರುವಂಥದ್ದು. ಕನ್ನಡ ನಮ್ಮ ಬದುಕು. ಕನ್ನಡ ನಮಗೆ ಸಾಕಿ ಸಲುಹಿದೆ. ಕನ್ನಡದ ಬಗ್ಗೆ ನಮಗೆ ಅಭಿಮಾನ ಇರಬೇಕು ಎಂದರು.
ಬುಡಾ ಎಂಜನಿಯರ್ ಎಂ.ವಿ.ಹಿರೇಮಠ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಅಖಿಲ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಮನೋಹರ ನಾಯಕ ಅವರಿಗೆ ಸನ್ಮಾನಿಸಲಾಯಿತು. ಅಖಿಲ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಅವರಿಗೆ ಗೌರವಿಸಲಾಯಿತು.
ಗಡಿಭಾಗದ ತಲ್ಲಣಗಳು ಎಂಬ ಕುರಿತು ಮಾತನಾಡಿದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ಗಡಿ ಪ್ರಾಧಿಕಾರದ ಅಧ್ಯಕ್ಷರು ಕೇವಲ ಬೆಂಗಳೂರು ಮಾತ್ರ ಕೂಡುವುದು ಬೇಡ. ತಿಂಗಳಿಗೆ ಎರಡು ಬಾರಿಯಾದರೂ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಗಡಿ ಭಾಗದ ಸಮಸ್ಯೆಯ ಬಗ್ಗೆ ಚರ್ಚೆ ನಡೆಸುವಂತಾಗಬೇಕು ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನಿರಂತರವಾಗಿ ಕನ್ನಡದ ಹೋರಾಟಕ್ಕೆ ಶ್ರಮಿಸುತ್ತಿದ್ದಾರೆ. ಕನ್ನಡದ ಯಾವುದೇ ಕೆಲಸಕ್ಕೂ ಮಂಚೂಣಿಯಲ್ಲಿರುತ್ತಾರೆ. ಗಡಿ ಪ್ರಾಧಿಕಾರದ ಅಧ್ಯಕ್ಷರು ಶ್ರೀಮಠಕ್ಕೆ ಬಂದಿರುವುದು ಸಂತಸದ ಸಂಗತಿ. ಬೆಳಗಾವಿಯಲ್ಲಿಯೂ ತಿಂಗಳಿಗೆ ಎರಡು ಬಾರಿ ಗಡಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಸುವಂತಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಬಿ.ಎಸ್.ಗವಿಮಠ, ಡಿ.ಎಸ್.ಚೌಗುಲೆ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಪ್ರಕಾಶ ಗಿರಿಮಲ್ಲನವರ ಉಪಸ್ಥಿತರಿದ್ದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಗುರುದೇವಿ ಹುಲ್ಲೆಪ್ಪನವರಮಠ ಮಾತನಾಡಿ, ಕನ್ನಡದ ಉಳಿವಿಗೆ ನಾವೆಲ್ಲ ಶ್ರಮಿಸುವ ಅಗತ್ಯ ಇದೆ ಎಂದರು.
ಪ್ರೀಯಾ ಪುರಾಣಿಕ, ಜ್ಯೋತಿ ಬದಾಮಿ, ಸುಮಂಗಲಾ ಶಿಂತ್ರೆ, ಸುನಂದಾ ಎಮ್ಮಿ, ಆಶಾ ಪರಿಟ್, ಆನಂದ, ಅನ್ನಪೂರ್ಣ ಹಿರೇಮಠ, ಮಹಾದೇವಿ ಪಾಟೀಲ, ಮಹಾದೇವ ಬಿರಾದಾರ ಕವನ ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕ ಸಂವಾದಲ್ಲಿ ಭಾಗವಹಿಸಿದ್ದ ರಾಯಬಾಗದ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ರಾಜಕೀಯ ಇಚ್ಚಾಶಕ್ತಿಯು ಅವಶ್ಯಕತೆ ಇದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಮುಕ್ತಾರ ಹುಸೇನ್ ಮಾತನಾಡಿ, ನಾವು ಯಾವುದೇ ಜಾತಿಯವರಾಗಿದ್ದರೂ ನಾವು ಕರ್ನಾಟಕದವರು ಎನ್ನುವ ಅಭಿಮಾನ ಇರಬೇಕು ಎಂದರು.
ಧಾರವಾಡದ ಕವಿತಾ ಹಿರೇಮಠ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ಮತ್ತು ಸಾಂಸ್ಕೃತಿಕ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಕಾರ್ಯಕ್ರಮಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರಯ್ಯ ಸಾಲಿಮಠ ನಿರೂಪಿಸಿದರು. ಶ್ರೀಧರ ಭಜಂತ್ರಿ, ವೈಷ್ಣವಿ ಕುಲಕರ್ಣಿ, ಶಿವಾನಂದ ಬಡಿಗೇರ, ಶಾಂತಲಾ ನಾಟ್ಯನಾದಸ್ವದ ಸಂಗೀತ ಶಾಲೆ, ಪ್ರೇಮಾ ಉಪಾಧ್ಯೆ, ಕಾಡಪ್ಪ ಕಾನಾಪುರಿ, ಸಂಗಮೇಶ್ವರ ಭಜನಾ ತಂಡ, ಶಾಂತಲಾ ಉದೋಸಿ, ಸ್ವಾತಿ ಕಿಟದಾಳ ಸಂಗೀತ ಕಾರ್ಯಕ್ರಮ ನೆರವೆರಿಸಿದರು.
ಸಿರಸಂಗಿ ಲಿಂಗರಾಜರು ಪ್ರಸಾದಯೋಗಿಗಳು: ಡಾ.ವ್ಹಿ.ಎಸ್.ಮಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ