ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಗದ್ಗುರು ಶ್ರೀ ರೇಣುಕಾಚಾರ್ಯರ ತತ್ವ ಸಿದ್ದಾಂತವನ್ನು ಸಮಾಜಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಹುಕ್ಕೇರಿ ಹಿರೇಮಠ ಶ್ರೀಗಳು ಗಣೇಶೋತ್ಸವದ ಮಾದರಿಯಲ್ಲಿ ರೇಣುಕ ಉತ್ಸವ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದು ಬೆಂಗಳೂರು ವಿಭೂತಿಪುರ ಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಶಾಖೆಯಲ್ಲಿ ಶುಕ್ರವಾರದಿಂದ ಮಾ.16ರವರೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಅಂಗವಾಗಿ ರೇಣುಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಕಳದ ವರ್ಷದಿಂದ ಗಣೇಶ ಉತ್ಸವದ ಮಾದರಿಯೊಳಗೆ ರೇಣುಕ ಉತ್ಸವವನ್ನು ಆರಂಭಿಸಿದ್ದಾರೆ. ಐದು ದಿನ ರೇಣುಕರ ಮಹಾಮೂರ್ತಿಗೆ ವಿಶೇಷ ಪೂಜೆ, ಸಿದ್ದಾಂತ ಶಿಕಾಮಣಿ ಗ್ರಂಥಪಾರಾಯಣ, ರೇಣುಕ ವಿಜಯ ಪುರಾಣ ಪಠಣ ಮತ್ತು ರೇಣುಕರ ವಿಚಾರಧಾರೆಗಳನ್ನು ತಿಳಿಸುವುದರೊಂದಿಗೆ ಎಲ್ಲರು ಜಗದ್ಗುರು ರೇಣುಕಾಚಾರ್ಯರನ್ನು ಮನೆ ಮನೆಯಲ್ಲಿ ಪೂಜಿಸಬೇಕೆಂಬ ಸಂದೇಶ ಸಾರುತ್ತಿರುವುದು ಅಭಿಮಾನದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ್ ಭಾರತ ವೀರಶೈವ ಮಹಾಸಭೆಯ ಕರ್ನಾಟಕ ರಾಜ್ಯದ ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ ಅಬ್ಬಿಗೇರಿ ಮಾತನಾಡಿ, ಹುಕ್ಕೇರಿ ಶ್ರೀಗಳು ಹೇಳಿದಂತೆ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಎಲ್ಲರ ಮಾಡುವ ಅವಶ್ಯ ಇದೆ. ಅಖಿಲ ಭಾರತ ವೀರಶೈವ ಮಹಾಸಭೆ ಯುವ ಘಟಕ ಎಲ್ಲಾ ಭಾಗದಲ್ಲಿಯೂ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಮಾಡುತ್ತೇವೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ವೀರಶೈವ ಲಿಂಗಾಯತ ಪರಂಪರೆಯ ಮಹಾತ್ಮರ ವಿಚಾರವನ್ನು ತಿಳಿಸಬೇಕೆಂದರೆ ನಾವೆಲ್ಲರೂ ಸಾರ್ವತಿಕವಾಗಿ ಜಯಂತಿಯನ್ನು ಮಾಡಬೇಕು. ಹುಕ್ಕೇರಿ ಹಿರೇಮಠ ಆ ಕಾರ್ಯ ಮಾಡುವುದರೊಂದಿಗೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನೆ ದೇವರು ಮತ್ತು ಮನೆ ಗುರುಗಳು ನಮಗೆ ಆದರ್ಶ ಪರಂಪರೆಯನ್ನು ಕಲಿಸಿರುತ್ತಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಗುರುಗಳಾಗಿರುವ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಪ್ರತಿಯೊಬ್ಬರು ಮನೆ ಮನೆಯಲ್ಲಿ ಆಚರಿಸಬೇಕು. ಅದ್ದೂರಿಯಾಗಿ ಮಾಡಬೇಕು ಅಂತಿಲ್ಲ. ಆದರೆ, ಇದೇ 16 ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಆಚರಿಸಿ ಅವರ ಬೋಧಿಸಿರುವ ವಿಚಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ನಿಲಜಿ ಅಲೌಕಿಕಾ ಆಶ್ರಮದ ಶಿವಾನಂದ ಸ್ವಾಮೀಜಿ ಮಾತನಾಡಿ, ಇವತ್ತು ರೇಣುಕಾಚಾರ್ಯ ಜಯಂತಿಯಲ್ಲಿ ಎಲ್ಲ ಪರಂಪರೆಯ ಸ್ವಾಮೀಜಿ ಬಂದಿದ್ದಾರೆ. ಬೆಳಗಾವಿ ಕಾರಂಜಿಮಠದ ಶ್ರೀಗಳು ಆಗಮಿಸಿ ರೇಣುಕರ ಎಲ್ಲಾ ಸಮುದಾಯದ ಗುರುಗಳು ಎಂದು ತಿಳಿಸಿರುವುದು ಸಂತಸ ತಂದಿದೆ ಎಂದರು.
ಹಿರಿಯ ಸಾಹಿತಿ ಬಿ.ಎಸ್.ಗವಿಮಠ ಮಾತನಾಡಿ, ಒಡೆದು ಹೋಗುತ್ತಿರುವ ಸಮಾಜವನ್ನು ಕಟ್ಟಬೇಕೆಂದರೆ ಹುಕ್ಕೇರಿ ಹಿರೇಮಠ ಮಾದರಿಯಾಗಿ ನಿಲ್ಲುತ್ತಿದೆ ಎಂದರು.
ಬಸವ ಸಮಿತಿಯ ಮೋಹನ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಸವರಾಜ, ವಿಜಯ ಶಾಸ್ತ್ರೀ, ಚಂದ್ರಶೇಖರ ಶಾಸ್ತ್ರೀ, ಸಂಪತಕುಮಾರ ಶಾಸ್ತ್ರೀ, ಬುಡಾ ಎಂಜಿನಿಯರ್ ಮಹಾಂತೇಶ ಹಿರೇಮಠ, ವೀರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರ ಸಾಲಿಸವಡಿಮಠ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ