ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂಬ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಜನವರಿ 30ರಂದು ರೈಲ್ವೆ ಚಳುವಳಿ ನಡೆಸುವುದಾಗಿ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ಮೊದಲು ರೈಲು ತಡೆ ನಡೆಸಿ, ನಂತರ ಬೆಳಗಾವಿಯಲ್ಲಿ ಉಗ್ರ ಹೋರಾಟ ನಡೆಸಲು ನಿರ್ಧರಿಸಿದ್ದೇವೆ. ಕನ್ನಡಪರ ಸಂಘಟನೆಗಳು ಈ ವಿಚಾರವಾಗಿ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದರು.
ಈ ಹಿಂದೆ ಎಂಇಎಸ್ ನಿಷೇಧ ಮಾಡಬೇಕು ಎಂದು ಹೇಳಿದ್ದೆವು. ಎಂಇಎಸ್ ನಿಷೇಧ ಕುರಿತಾಗಲಿ, ಉದ್ಧವ್ ಠಾಕ್ರೆ ಹೇಳಿಕೆ ವಿಚಾರವಾಗಲಿ ಈ ವರೆಗೆ ಸಚಿವರು, ಶಾಸಕರು ಬಾಯಿಬಿಡುತ್ತಿಲ್ಲ. ಇವರಿಗೆ ಕುರ್ಚಿ ಆಟವೇ ಮುಖ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು. ಎಂಇಎಸ್ ನಿಷೇಧವಾಗಬೇಕು. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ವಿರೋಧಿ ನೀತಿ ಒಪ್ಪಲು ಸಾಧ್ಯವಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ಮಹಾ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ವಾಕ್ ದಂಡನೆ, ಛೀಮಾರಿ ಮಾಡಬೇಕು ಎಂದು ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ