ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎಂಇಎಸ್ ವಿರುದ್ಧ ಕರವೇ ನಾರಾಯಣಗೌಡ ನೇತೃತ್ವದ ಬಣದ ಪ್ರತಿಭಟನೆ ತೀವ್ರಗೊಂಡಿದ್ದು, ಬೆಳಗಾವಿಯಲ್ಲಿ ಲಾರಿ, ಬಸ್ ಗಳ ಮೇಲೆ ಹತ್ತಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಎಂಇಎಸ್, ಶಿವಸೇನೆ ಪುಂಡಾಟ ಪ್ರಕರಣದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಿಡಿದೆದ್ದಿದ್ದು, ಬೃಹತ್ ಪ್ರತಿಭಟನೆ ಮೂಲಕ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕರವೇ ನಾರಾಯಣಗೌಡ ನೇತೃತ್ವದ ಬಣವನ್ನು ಹಿರೇಬಾಗೇವಾಡಿ ಟೋಲ್ ಬಳಿ ಪೊಲೀಸರು ತಡೆದಿದ್ದಾರೆ.
ಪೊಲೀಸರ ಕ್ರಮದ ವಿರುದ್ಧ ಆಕ್ರೋಶಗೊಂಡ ಪ್ರತಿಭಟನಾಕಾರರು ರಸ್ತೆಯಲ್ಲಿಯೇ ಕುಳಿತು ಧರಣಿ ನಡೆಸಿದ್ದಾರೆ. ಇನ್ನೊಂದೆಡೆ ಮಹಿಳಾ ಕಾರ್ಯಕರ್ತರು ಲಾರಿಗಳನ್ನು ತಡೆದು ನಿಲ್ಲಿಸಿ ಅದರ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಶಕ್ಕೆ ಪಡೆಯಲು ಬಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ ನಡೆದಿದೆ.
ಇದೇ ವೇಳೆ ಪೊಲೀಸರು, ನಾರಾಯಣಗೌಡ ಹಾಗೂ ಹಲವು ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಾರಾಯಣಗೌಡ ಪೊಲೀಸರನ್ನು ಮುಂದಿಟ್ಟು ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆಸಿದೆ. ಇದು ಖಂಡನೀಯ. ಎಂಇಎಸ್ ಪುಂಡಾಟದ ಬಗ್ಗೆ ಧ್ವನಿಎತ್ತದ ಬೆಳಗಾವಿ ಶಾಸಕರು ರಣಹೇಡಿಗಳು, ಸುವರ್ಣಸೌಧದಲ್ಲಿ ಮುಟ್ಠಾಳರು ಕುಳಿತಿದ್ದಾರೆ. ಇಂದು ಕೂಡ ಸದನದಲ್ಲಿ ಈ ಬಗ್ಗೆ ಮಾತನಾಡದಿದ್ದರೆ ಶಾಸಕರು, ಸಚಿವರು ರಣಹೇಡಿಗಳು ಎಂಬುದು ಸಾಬೀತಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕವನ್ನೆ ಬಂದ್ ಮಾಡಿ ಹೋರಾಟ ನಡೆಸುತ್ತೇವೆ; ಪ್ರವೀಣ್ ಶೆಟ್ಟಿ ಎಚ್ಚರಿಕೆ…!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ