*ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭ; ಅಗಲಿದ ಗಣ್ಯರಿಗೆ ಸಂತಾಪ*
ಪ್ರಗತಿವಾಹಿನಿ ಸುದ್ದಿ; ಸುವರ್ಣಸೌಧ ಬೆಳಗಾವಿ: ಹದಿನಾರನೇ ವಿಧಾನಸಭೆಯ ಎರಡನೇ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ಆರಂಭವಾಗಿದೆ.
ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಸದನದ ಸದಸ್ಯರು ಸಂವಿಧಾನ ಪೀಠಿಕೆ ಓದುವ ಮೂಲಕ ಅಧಿವೇಶನದ ಕಾರ್ಯ ಕಲಾಪಗಳಿಗೆ ಚಾಲನೆ ನೀಡಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಮಾಜಿ ಸಭಾಧ್ಯಕ್ಷ ಡಿ.ಬಿ.ಚಂದ್ರೇಗೌಡ, ಮಾಜಿ ಸಚಿವ ಶ್ರೀರಂಗದೇವರಾಯಲು, ಮಾಜಿ ಶಾಸಕರುಗಳಾದ ಸಿ.ವೆಂಕಟೇಶಪ್ಪ, ಶ್ರೀಕಾಂತ್ ಶೆಟ್ಟಪ್ಪ ಭೀಮಣ್ಣವರ, ವಿಲಾಸಬಾಬು ಆಲಮೇಕರ್, ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಾಲರಾಗಿದ್ದ ಪಿ.ಬಿ.ಆಚಾರ್ಯ ಹಾಗೂ ಇತ್ತೀಚೆಗೆ ಉಗ್ರರ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ಮಂಗಳೂರು ಜಿಲ್ಲೆಯ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿದಂತೆ ಕ್ಯಾಪ್ಟನ್ ಶುಭಂ ಗುಪ್ತಾ, ಹವಾಲ್ದಾರ್ ಅಬ್ದುಲ್ ಮಜಿದ್, ಲಾನ್ಸ್ ನಾಯ್ಕ್ ಸಂಜಯ್ ಬಿಸ್ಟ್ ಮತ್ತು ಪಾರಾಟ್ರುಪರ್ ಸಚಿನ್ ಲಾರ್ ಅವರಿಗೆ ಸಂತಾಪ ಸೂಚನಾ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ನಿರ್ಣಯದ ಮೇಲೆ ಮಾತನಾಡಿ, ಡಿ.ಬಿ.ಚಂದ್ರೇಗೌಡ ಅವರು ಒಳ್ಳೆಯ ಸಂಸ್ಕಾರಗಳನ್ನು ಮೈಗೂಡಿಸಿಕೊಂಡಿದ್ದ ಮೇರು ವ್ಯಕ್ತಿಯಾಗಿದ್ದರು. ಸದನ ಕಾರ್ಯಕಲಾಪಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಸ್ನೇಹಿಜೀವಿಯಾಗಿದ್ದು ಅಜಾತ ಶತ್ರುವಾಗಿದ್ದರು. ಅವರೊಂದಿಗಿನ ಒಡನಾಟ ಸದಾಕಾಲ ಸ್ಮರಣೀಯ ಎಂದರು.
ವಿಜಯನಗರ ಸಾಮ್ರಾಜ್ಯದ ರಾಜಮನೆತನಕ್ಕೆ ಸೇರಿದ ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಶ್ರೀರಂಗದೇವರಾಯಲು ಅವರು,ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು. ಅವರ ಅಧಿಕಾರದ ಅವಧಿಯಲ್ಲಿ ಹಲವು ಜನಪರ ಕಾರ್ಯಗಳನ್ನು ಕೈಗೊಂಡು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಮಾಜಿ ಶಾಸಕರುಗಳಾದ ಸಿ.ವೆಂಕಟೇಶಪ್ಪ, ಶ್ರೀಕಾಂತ್ ಶೆಟ್ಟಪ್ಪ ಭೀಮಣ್ಣವರ, ವಿಲಾಸಬಾಬು ಆಲಮೇಕರ್, ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಾಲರಾಗಿದ್ದ ಪಿ.ಬಿ.ಆಚಾರ್ಯ ಅವರ ನಿಧನಕ್ಕೂ ಅವರು ಸಂತಾಪ ಸೂಚಿಸಿದರು.
ನವೆಂಬರ್ ೨೨ ರಂದು ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ರಾಜ್ಯದ ಕ್ಯಾಪ್ಟನ್ ಎಂ.ವಿ.ಪ್ರಾAಜಲ್ ಹುತಾತ್ಮರಾಗಿದ್ದರೆ. ಸಣ್ಣ ವಯಸ್ಸಿನಲ್ಲಿಯೇ ದೇಶ ಸೇವೆಗಾಗಿ ಪ್ರಾಣ ಅರ್ಪಿಸಿದ ಅವರ ತ್ಯಾಗ ದೊಡ್ಡದು. ಕ್ಯಾಪ್ಟನ್ ಎಂ.ವಿ.ಪ್ರಾAಜಲ್ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಿದ ವೇಳೆ ಖುದ್ದು ಹಾಜರಾಗಿ ಗೌರವ ಸೂಚಿಸಿದೆ. ಇವರೊಂದಿಗೆ ಹುತಾತ್ಮರಾದ ಕ್ಯಾಪ್ಟನ್ ಶುಭಂ ಗುಪ್ತಾ, ಹವಲ್ದಾರ್ ಅಬ್ದುಲ್ ಮಜಿದ್, ಲಾನ್ಸ್ ನಾಯ್ಕ್ ಸಂಜಯ್ ಬಿಸ್ಟ್ ಮತ್ತು ಪಾರಾಟ್ರುಪರ್ ಸಚಿನ್ ಲಾರ್ ಅವರ ಆತ್ಮಗಳಿಗೂ ಶಾಂತಿ ದೊರಕಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಡಿ.ಬಿ.ಚಂದ್ರೇಗೌಡ ರಾಜ್ಯದ ಮುತ್ಸದ್ದಿ ರಾಜಕಾರಣಿ ಆಗಿದ್ದರು. ರಾಜಕೀಯ ವಲಯದಲ್ಲಿ ‘ಡಿಬಿಸಿ’ ಎಂದು ಚಿರಪರಿಚಿತರಾಗಿದ್ದರು. ಹಲವು ರಾಜಕೀಯ ವಿಷಯಗಳಿಗೆ ಡಿ.ಬಿ.ಚಂದ್ರೇಗೌಡರ ಬಳಿ ತೆರಳಿ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ಇಂದಿರಾಗಾಂಧಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಡಿ.ಬಿ.ಚಂದ್ರೇಗೌಡ ಅವರು ಕ್ಷೇತ್ರ ತ್ಯಾಗ ಮಾಡಿದರು. ಬೆಂಗಳೂರಿನಿAದ ಬಿಜೆಪಿ ಪಕ್ಷದ ಪರವಾಗಿ ಲೋಕಸಭೆಗೆ ಸ್ಪರ್ಧಿಸಿ ಜಯಶೀಲರಾದರು. ವಿಧಾನ ಸಭೆ, ಪರಿಷತ್, ಲೋಕಸಭೆ ಹಾಗೂ ರಾಜ್ಯ ಸಭೆಗಳ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ ಡಿ.ಬಿ.ಚಂದ್ರೇಗೌಡ ಅವರದು ಎಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾಗಿದ್ದ ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ ಈಶಾನ್ಯ ರಾಜ್ಯಗಳಲ್ಲಿ ಶೈಕ್ಷಣಿಕ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ದೇಶದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಆದರೂ ಗಡಿಯಲ್ಲಿ ಉಗ್ರಗಾಮಿಗಳ ಉಪಟಳ ನಿಂತಿಲ್ಲ. ಉಗ್ರರೊಂದಿಗೆ ದಿಟ್ಟತನದಿಂದ ಹೋರಾಡಿ ಹುತಾತ್ಮರಾದ ಕರ್ನಾಟಕದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಹಾಗೂ ಅವರ ಸಹೊದ್ಯೋಗಿ ಯೋಧರ ತ್ಯಾಗವನ್ನು ದೇಶದ ಜನತೆ ಮರೆಯುವುದಿಲ್ಲ ಎಂದರು.
ಮಾಜಿ ಸಚಿವ ಶ್ರೀರಂಗದೇವರಾಯಲು, ಮಾಜಿ ಶಾಸಕರುಗಳಾದ ಸಿ.ವೆಂಕಟೇಶಪ್ಪ, ಶ್ರೀಕಾಂತ್ ಶೆಟ್ಟಪ್ಪ ಭೀಮಣ್ಣವರ, ವಿಲಾಸಬಾಬು ಆಲಮೇಕರ್ ಅವರು ಸಹ ಶಾಸಕರಾಗಿ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಸಂತಾಪ ಸೂಚನೆ ನಿರ್ಯಣದ ಮೇಲೆ ಗೃಹ ಸಚಿ ಡಾ.ಜಿ.ಪರಮೇಶ್ವರ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಅರಗ ಜ್ಞಾನೇಂದ್ರ, ಹೆಚ್.ಕೆ.ಪಾಟೀಲ್, ವಿಜಯೇಂದ್ರ, ಜನಾರ್ದನ ರೆಡ್ಡಿ, ಬಸವರಾಜ ರಾಯರೆಡ್ಡಿ, ಬಿ.ಆರ್.ಪಾಟೀಲ್, ಶಾಸಕಿ ನಯನ ಮೋಟಮ್ಮ ಸೇರಿದಂತೆ ಇತರ ಶಾಸಕರು ಮಾತನಾಡಿದರು. ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಆಚರಿಸಲಾಯಿತು.
ವಿಧಾನ ಪರಿಷತ್ ; ಅಗಲಿದ ಗಣ್ಯರಿಗೆ ಸಂತಾಪ:
ಅಧಿವೇಶನದ ಮೊದಲ ದಿನ ಹಿರಿಯರ ಮನೆಯೆನಿಸಿರುವ ವಿಧಾನ ಪರಿಷತ್ತಿನಲ್ಲಿಯೂ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಇತ್ತೀಚೆಗೆ ನಿಧನರಾದ ರಾಜ್ಯ ವಿಧಾನಮಂಡಲದ ಎರಡೂ ಸದನಗಳ ಹಾಗೂ ಸಂಸತ್ತಿನ ಉಭಯ ಸದನಗಳ ಮಾಜಿಸದಸ್ಯರು, ಮಾಜಿ ಸಚಿವರು, ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾಗಿದ್ದ ಡಿ.ಬಿ.ಚಂದ್ರೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಸ್. ವಿಶ್ವನಾಥ, ಹಿರಿಯ ವಿಜ್ಞಾನಿ ಪ್ರೊ. ಎಂ.ಆರ್. ಸತ್ಯನಾರಾಯಣರಾವ್, ಹಿರಿಯ ವಿಜ್ಞಾನಿ ಡಾ.ವಿ.ಎಸ್. ಅರುಣಾಚಲಂ, ಖ್ಯಾತ ಸಂಖ್ಯಾಶಾಸ್ತçಜ್ಞ ಡಾ: ಕಲ್ಯಂಪುಡಿ ರಾಧಾಕೃಷ್ಣರಾವ್, ಹಸಿರುಕ್ರಾಂತಿಯ ಹರಿಕಾರ ಡಾ.ಎಂ.ಎಸ್. ಸ್ವಾಮಿನಾಥನ್, ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟಿ ಮಮತಾ ಗುಡೂರ್, ಹಿರಿಯ ಲೇಖಕಿ ಡಾ: ಕಮಲಾ ಹೆಮ್ಮಿಗೆ , ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ ರಾವ್, ಹಿರಿಯ ಹಿಂದೂಸ್ತಾನಿ ಗಾಯಕ ಪ್ರೊ. ಹನುಮಣ್ಣ ನಾಯಕ ದೊರೆ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಸಭಾನಾಯಕ ಎನ್.ಎಸ್.ಬೋಸರಾಜ ಸಂತಾಪ ಸೂಚಿಸಿ ನಿರ್ಣಯ ಅನುಮೋದಿಸಿ ಅಗಲಿದ ಗಣ್ಯರ ಸಾಧನೆಗಳ ಮೇಲೆ ಬೆಳಕು ಚೆಲ್ಲಿದರು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಮಾತನಾಡಿ ಗೌರವ ಸೂಚಿಸಿದರು.ಅಗಲಿದ ಗಣ್ಯರ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ