*ಟೈರ್ ಟ್ಯೂಬ್ ಮೇಲೇರಿ ನದಿ ದಾಟುತ್ತಿರುವ ವಿದ್ಯಾರ್ಥಿಗಳು; ಎಚ್ಚೆತ್ತು ಸ್ಥಳಕ್ಕೆ ದೌಡಾಯಿಸಿದ ಕಿತ್ತೂರು ಶಾಸಕ*
ಕಿರು ಸೇತುವೆ ನಿರ್ಮಾಣದ ಭರವಸೆ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮ ಕೆರೆ ನೀರಿನ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದು, ಗ್ರಾಮಸ್ಥರು, ವಿದ್ಯಾರ್ಥಿಗಳು ಟೈರ್ ಟ್ಯೂಬ್ ನಲ್ಲಿ ಕುಳಿತು ನದಿ ದಾಟುತ್ತಿರುವ ಪರಿಸ್ಥಿತಿ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದೆ ಶಾಸಕರು ಎಚ್ಚೆತ್ತುಕೊಂಡಿದ್ದಾರೆ.
ಭಾರಿ ಮಳೆಯಿಂದ ನಿಂಗಾಪುರ ಗ್ರಾಮ ನಡುಗಡ್ಡೆಯಂತಾಗಿದ್ದು, ಕೆರೆ ನೀರು ಸುತ್ತಲು ಗ್ರಾಮವನ್ನು ಆವರಿಸಿದೆ. ಇದರಿಂದಾಗಿ ಗ್ರಾಮಸ್ಥರು ಕೆರೆಯಲ್ಲಿ ಈಜಿಕೊಂಡು ಬರಬೇಕು, ಇಲ್ಲವೇ ಟೈರ್ ಟ್ಯೂಬ್ ಬಳಸಿ ಗ್ರಾಮದಿಂದ ಹೊರಬಂದು ಕೆಲಸಕಾರ್ಯಗಳಲ್ಲಿ ತೊಡಗಬೇಕು. ಈ ಸ್ಥಿತಿ ಇಂದು ನಿನ್ನೆಯದಲ್ಲ. ಕಳೆದ 20 ವರ್ಷಗಳಿಂದ ನಿಂಗಾಪುರ ಗ್ರಾಮಸ್ಥರದ್ದು ಇದೇ ದುಸ್ಥಿತಿ. ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಸಂಕಷ್ಟಕ್ಕೆ ಈವರೆಗೂ ಸ್ಪಂದಿಸಿಲ್ಲ. ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದರೂ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ರೋಸಿ ಹೋಗಿರುವ ಗ್ರಾಮಸ್ಥರು ಮಳೆಗಾಲದಲ್ಲಿ ಪಡಬಾರದ ಕಷ್ಟ ಅನುಭವಿಸುತ್ತಲೇ ಇದ್ದಾರೆ.
ಈ ಬಾರಿಯೂ ಮಳೆ ಅವಾಂತರದಿಂದ ನಿಂಗಾಪುರ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದ್ದು, ಕೆರೆ ಹಿನ್ನೀರು ಗ್ರಾಮವನ್ನು ಆವರಿಸಿದೆ. ವಿದ್ಯಾರ್ಥಿಗಳು ಕೆರೆಯಲ್ಲಿ ಟೈರ್ ಟ್ಯೂಬ್ ಮೇಲೇರಿ ಜೀವ ಕೈಯಲ್ಲಿ ಹಿಡಿದು, ಒಂದು ದಡದಿಂದ ಇನ್ನೊಂದು ದಡಕ್ಕೆ ತೆರಳಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಗ್ರಾಮಸ್ಥರು ಹಲವರು ಈಜಿಕೊಂಡು ಸಾಗುತ್ತಿದ್ದರೆ, ಇನ್ನು ಹಲವರು ಟ್ಯೂಬ್ ಬಳಸಿ ತೆರಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್, ತಹಶೀಲ್ದಾರ್ ಜೊತೆಗೂಡಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗ್ರಾಮಸ್ಥರ, ಮಕ್ಕಳ ಸಂಕಷ್ಟ ಕಣ್ಣಾರೆ ಕಂಡಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕರು, ನಿಂಗಾಪುರ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಈ ಬಾರಿ ಬೇಸಿಗೆಯಲ್ಲಿ ಕಿರು ಸೇತುವೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ತಾತ್ಕಾಲಿಕ ವ್ಯವಸ್ಥೆಯಾಗಿ ಒಂದು ದೋಣಿ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಶಾಸಕರ ಭರವಸೆ ಈ ಬಾರಿ ಈಡೇರುವುದೇ? ಗ್ರಾಮಸ್ಥರು, ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಗುವುದೇ? ಕಾದುನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ