*ಬೆಳಗಾವಿ: ಟೈರ್ ಟ್ಯೂಬ್ ಮೇಲೇರಿ ನದಿ ದಾಟಿ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಅಬ್ಬರಕ್ಕೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಇನ್ನು ಹಲವೆಡೆಗಳಲ್ಲಿ ಶಾಲೆಗಳು ನಡೆಯುತ್ತಿವೆ. ಮಳೆ ಅವಾಂತರ, ತುಂಬಿ ಹರಿಯುತ್ತಿರುವ ನದಿಯಲ್ಲಿ ಮಕ್ಕಳು ಜೀವದ ಹಂಗು ತೊರೆದು ನದಿ ದಾಟಿ ಶಾಲೆಗೆ ತೆರಳುತ್ತಿರುವ ಪರಿಸ್ಥಿತಿ ಕಂಡುಬಂದಿದೆ.
ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ಕೆರೆ ತುಂಬಿ ಹಿನ್ನೀರು ಗ್ರಾಮದ ತುಂಬೆಲ್ಲ ಆವರಿಸಿಕೊಂಡಿದೆ. ಇದರಿಂದ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಗ್ರಾಮಸ್ಥರು ಹೊರ ಹೋಗಬೇಕೆಂದರೆ ನದಿಯಲ್ಲಿ ಈಜಿ ಇಲ್ಲವೇ ಟೈರ್ ಟ್ಯೂಬ್ ಮೇಲೇರಿ ನದಿ ದಾಟಿ ಹೋಗಬೇಕಾದ ಸ್ಥಿತಿ ಇದೆ. ಇನ್ನು ಶಾಲಾ ಮಕ್ಕಳಂತು ಪ್ರತಿ ದಿನ ಇದೇ ಸಮಸ್ಯೆಯನ್ನು ಎದುರಿಸಬೇಕಾದ ದುಸ್ಥಿತಿ.
ವಿದ್ಯಾರ್ಥಿಗಳು ನಿತ್ಯವೂ ಶಾಲೆಗೆ ತೆರಳುವಾಗ ನದಿಯ ಒಂದು ದಡಕ್ಕೆ ಪೋಷಕರು ನಿಂತು ಟೈರ್ ಟ್ಯೂಬ್ ಗೆ ಹಗ್ಗ ಕಟ್ಟಿ ಎಳೆಯುತ್ತಾರೆ. ಟೈರ್ ಟ್ಯೂಬ್ ಮೇಲೆ ವಿದ್ಯಾರ್ಥಿಗಳು ಕುಳಿತು ನದಿಯಲ್ಲಿ ಸಾಗಿ ದಡ ಸೇರುತ್ತಾರೆ. ಪ್ರಾಣದ ಹಂಗು ತೊರೆದು ದುಸ್ಸಾಹಸ ಮಾಡಿ ಮಕ್ಕಳು ಶಾಲೆಗೆ ತೆರಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ 20 ವರ್ಷಗಳಿಂದ ಮಳೆಗಾಲದಲ್ಲಿ ಈ ಗ್ರಾಮದಲ್ಲಿ ಇದೇ ಪರಿಸ್ಥಿತಿ. ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳ ಸಂಕಷ್ಟ ಹೇಳತೀರದು. ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ