9 ಸಾವಿರಕ್ಕೂ ಅಧಿಕ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ, ಇದು ಭಾರತದಲ್ಲಿಯೇ ಅತ್ಯಧಿಕ : ಡಾ. ಎಂ. ವಿ. ಜಾಲಿ
ಪ್ರಗತಿವಾಹಿನಿ ಸುದ್ದಿ;ಬೆಳಗಾವಿ: ಸೀಳು ತುಟಿ ತೊಂದರೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚು. ಅವರಿಗೆ ತಾಯಿಯ ಎದೆಹಾಲು ಹಾಗೂ ಅನ್ನವನ್ನು ಸೇವಿಸಲು ಸಮಸ್ಯೆಯುಂಟಾಗುತ್ತದೆ. ಕೇವಲ ಈ ಮಕ್ಕಳಷ್ಟೆ ಅಲ್ಲ, ಎಲ್ಲ ಮಕ್ಕಳು ಅಪೌಷ್ಟಿಕತೆಯಿಂದ ಮುಕ್ತವಾಗಲು ಪಾಲಕರ ಜವಾಬ್ದಾರಿ ಅತ್ಯಂತ ಮುಖ್ಯವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ಮಾಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಳುತುಟಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲಿ ಆರೋಗ್ಯ ಸಮಸ್ಯೆಯನ್ನು ಎದುರಿಸಬಾರದು ಎಂಬ ಉದ್ದೇಶದಿಂದ ಆ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ. ಇಲ್ಲಿಯವರೆಗೆ ಸುಮಾರು 9 ಸಾವಿರಕ್ಕೂ ಅಧಿಕ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಭಾರತದಲ್ಲಿಯೇ ಅತ್ಯಧಿಕ ಎಂದು ತಿಳಿಸಿದರು.
ಆಹಾರ ಪದ್ದತಿ ಎಂದರೆ ಕೇವಲ ದುಬಾರಿ ಆಹಾರ, ಹಣ್ಣುಗಳಲ್ಲ. ಮನೆಯಲ್ಲಿಯೇ ಸಾಂಪ್ರದಾಯಿಕವಾಗಿ ಸಿಗುವ ಆಹಾರವನ್ನು ಆರೋಗ್ಯಯುತವಾಗಿ ತಯಾರಿಸಿ ಮಕ್ಕಳಿಗೆ ನೀಡಬೇಕು. ಕಡಿಮೆ ವೆಚ್ಚದಲ್ಲಿ ದೊರೆಯುವ ಬಾಳೆಹಣ್ಣನ್ನು ದಿನ ಒಂದರಂತೆ ನೀಡಬೇಕು. ಇದರಿಂದ ಮಗುವಿನ ಬೆಳವಣಿಗೆಗೆ ಪ್ರೇರಕವಾಗಲಿದೆ. ಊಟಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿಯಂತೆ ಸರಿಯಾದ ಆಹಾರ ಶೈಲಿಯನ್ನು ಬೆಳೆಸಿಕೊಂಡರೆ ರೋಗಮುಕ್ತ ಹಾಗೂ ಸಧೃಡ ಸಮಾಜ ನಿರ್ಮಾಣ ಸಾಧ್ಯ. ಇದರಲ್ಲಿ ಪಾಲಕರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದರು.
ಹಿರಿಯ ಪ್ಲಾಸ್ಟಿಕ್ ಸರ್ಜನ್ ಡಾ. ರಾಜೇಶ ಪವಾರ ಮಾತನಾಡಿ, 2001 ರಲ್ಲಿ ಪ್ರಾರಂಭವಾದ ಸ್ಮೈಲ್ ಟ್ರೇನ್ ಪ್ರೊಜೆಕ್ಟನಿಂದ ಈ ಭಾಗದ ಅನೇಕ ಮಕ್ಕಳಿಗೆ ಅನುಕೂಲವಾಗಿದೆ. ಉಚಿತ ಶಸ್ತ್ರಚಿಕಿತ್ಸೆ ಮೂಲಕ ಮಕ್ಕಳ ಮೊಗದಲ್ಲಿ ನಗೆ ಮೂಡಿಸಲಾಗಿದೆ. ಇಲ್ಲಿಯವರೆಗೆ ಸುಮಾರು 9 ಸಾವಿರಕ್ಕೂ ಅಧಿಕ ಸೀಳು ತುಟಿ ಹಾಗೂ ಅಂಗಳ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ವಿವರಿಸಿದರು.
ನರ್ಸಿಂಗ್ ಮಹಾವಿದ್ಯಾಲಯದ ಪ್ರಾಚರ್ಯರಾದ ಡಾ. ಸುಧಾ ರೆಡ್ಡಿ ಅವರು ಮಾತನಾಡಿದರು. ಸಮಾರಂಭದ ನಂತರ ಸೀಳು ತುಟಿ ಮಕ್ಕಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಡಾ. ಬಿನಿತಾ ಮಲ್ಲಾಪೂರ, ಡಾ. ಚೇತನ ಎಸ್ ವಿ., ಡಾ ಅನುಷಾ, ಕಾಶವ್ವ ಉಪ್ಪಿನ, ಗಂಗಾಧರ ಸಂಗೋಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಮತದಾರರ ಪಟ್ಟಿ ಸೇರ್ಪಡೆ, ತಿದ್ದುಪಡಿಗಾಗಿ ಇಲ್ಲಿದೆ ಆ್ಯಪ್: ಡೌನ್‌ಲೋಡ್ ಮಾಡಿಕೊಳ್ಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ