Kannada News

*ಬೆಳಗಾವಿ: ಕೆಎಲ್‌ಇ ಆಸ್ಪತ್ರೆಯಲ್ಲಿ ಒಜಾಕಿ ವಿಧಾನ ಆರಂಭ; ಹೃದಯ ಕವಾಟ ಸಮಸ್ಯೆಯಿರುವವರಿಗೆ ವರದಾನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರಚಿಕಿತ್ಸಾ ವಿಭಾಗವು ಅತ್ಯಾಧುನಿಕವಾದ ಒಜಾಕಿ ವಿಧಾನವನ್ನು ಅಳವಡಿಸಿಕೊಂಡಿದ್ದು, ಇದರಿಂದ ಹೃದಯದ ಮಹಾಪಧಮನಿ ಕವಾಟದ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿಗೆ ವರದಾನವಾಗಿ ಪರಿಣಮಿಸಿದೆ.

ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಭಾರತದ 8 ಕೇಂದ್ರಗಳಲ್ಲಿ ಕೆಎಲ್ ಇ ಆಸ್ಪತ್ರೆ ಒಂದಾಗಿದೆ. ಕಳೆದ ಎರಡು ದಿನಗಳಲ್ಲಿ 5 ರೋಗಿಗಳು ಈ ತಂತ್ರಜ್ಞಾನದ ಪ್ರಕ್ರಿಯೆಗೆ ಯಶಸ್ವಿಯಾಗಿ ಒಳಗಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಮಲೇಷ್ಯಾದ ಐ ಜೆ ಎನ್ ವೈದ್ಯಕೀಯ ಮಹಾವಿದ್ಯಾಲಯದ ಡಾ.ಶಿವಕುಮಾರ್ ಶಿವಲಿಂಗಂ ಅವರು ಇತ್ತೀಚೆಗೆ ಆಸ್ಪತ್ರೆಯಲ್ಲಿ ಈ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ನಂತರ ಮಾತನಾಡಿದ ಅವರು, ಮಾನವನ ಹೃದಯವು ನಾಲ್ಕು ಕವಾಟ( ವಾಲ್ವ್)ಗಳನ್ನು ಹೊಂದಿದ್ದು, ಮಹಾಪಧಮನಿ(ರ‍್ಟಿಕ್ ವಾಲ್ವ್) ಕವಾಟವು ಸಾಮಾನ್ಯವಾಗಿ ಸೋಂಕಿನಿಂದ ತೊಂದರೆಗೊಳಗಾಗಿ, ಸೋರಿಕೆ ಅಥವಾ ವಯಸ್ಸಾದ ಕಾರಣ ಕುಗ್ಗುತ್ತದೆ. ಈ ವಿಧಾನಕ್ಕೂ ಮುಂಚೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮೆಟಲ್ ಅಥವಾ ಅಂಗಾಂಶ ಕವಾಟ( ವಾಲ್ವ್) ದಿಂದ ಮಾತ್ರ ಬದಲಾಯಿಸಲಾಗುತ್ತಿತ್ತು. ಮಹಾಪಧಮನಿಯ ಕವಾಟದ ಬದಲಾವಣೆಯು ತನ್ನದೇ ಆದ ಮಿತಿ ಹಾಗೂ ತೊಂದರೆಗಳನ್ನು ಹೊಂದಿದೆ. ಕವಾಟದ ನಿರ್ವಹಣೆಗಾಗಿ ಮೇಲಿಂದ ಮೇಲೆ ವೈದ್ಯರ ಭೇಟಿ, ಜೀವಮಾನವಿಡೀ ರಕ್ತ ತೆಳುವಾಗಿಸುವ ಔಷಧಿಯನ್ನು ಸೇವಿಸಬೇಕಾಗಿತ್ತು. ಅಲ್ಲದೇ ಇವುಗಳ ಜೀವಿತಾವಧಿ ೧೦-೧೫ ವರ್ಷಗಳು ಮಾತ್ರ. ಈ ವಿಧಾನವನ್ನು ಜಪಾನದ ಹೃದ್ರೋಗ ತಜ್ಞವೈದ್ಯರಾದ ಡಾ. ಯುಕಿಯೋ ಒಝಾಕಿ ಅವರು ಅಭಿವೃದ್ದಿಪಡಿಸಿದ್ದು, ಅವರ ಹೆಸರಿನಿಂದಲೇ ಇದನ್ನು ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ.ರಿಚರ್ಡ್ ಸಲ್ಡಾನ್ಹಾ ಅವರು ಮಾತನಾಡಿ, ಈ ಅತ್ಯಾಧುನಿಕ ವಿಧಾನವನ್ನು ಎಲ್ಲ ವಯಸ್ಸಿನ ರೋಗಿಗಳ ಮೇಲೆ ನಡೆಸಬಹುದು. ‘ಓಜಾಕಿ’ ತಂತ್ರಜ್ಞಾನವು ಹೃದಯದ ಸುತ್ತಲಿನ ಚೀಲದಿಂದ ಅಂಗಾಂಶವನ್ನು ಬಳಸಿಕೊಂಡು ಮಹಾಪಧಮನಿಯ ಕವಾಟವನ್ನು ಪುನರ್ನಿರ್ಮಿಸುವ ನಾವಿಣ್ಯಪೂರ್ಣ ಮತ್ತು ಪರ್ಯಾಯ ತಂತ್ರವಾಗಿದೆ (ಆಟೋಲೋಗಸ್ ಪೆರಿಕಾರ್ಡಿಯಮ್). ರೋಗಿಯ ಪೆರಿಕಾರ್ಡಿಯಮ್ ಅನ್ನು ಬಳಸಿಕೊಂಡು ಮೂರು ಪದರಗಳನ್ನು ಮರುನಿರ್ಮಾಣ ಮಾಡಲಾಗುತ್ತದೆ. ಈ ಅತ್ಯಾಧುನಿಕ ವಿಧಾನದಿಂದ ಕವಾಟವನ್ನು ರಕ್ಷಿಸಿ, ದೀರ್ಘಾಯುಷ್ಯ ಪಡೆಯುತ್ತದೆ. ರೋಗಿಗಳು ತಮ್ಮ ಜೀವಿತಾವಧಿಯಲ್ಲಿ ರಕ್ತ ತೆಳುವಾಗಿಸುವ ಔಷಧಿಯ ಅವಶ್ಯಕತೆ ಇರುವುದಿಲ್ಲ. ಅಲ್ಲದೇ ಪಾರ್ಶ್ವವಾಯು ಮತ್ತು ದೀರ್ಘಕಾಲದ ಔಷಧಿಗಳ ಅಡ್ಡಪರಿಣಾಮಗಳಂತಹ ವೈದ್ಯಕೀಯ ಸಮಸ್ಯೆಯಿಂದ ದೂರವಿರಬಹುದು ಎಂದರು.

ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಮೋಹನ್ ಗಾನ್, ಅರವಳಿಕೆ ತಜ್ಞವೈದ್ಯರಾದ ಡಾ. ಶರಣಗೌಡ ಪಾಟೀಲ್, ಡಾ.ಆನಂದ ವಗರಾಳಿ, ಡಾ. ರಂಜಿತ ನಾಯಕ, ಡಾ. ಗನಂಜಯ ಸಾಳ್ವೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಬಿ ದಯಾನಂದ ಅವರು, ಆಸ್ಪತ್ರೆಗೆ ಭೇಟಿ ನೀಡಿದ ಮಲೇಷಿಯಾದ ಡಾ. ಶಿವಕುಮಾರ್ ಹಾಗೂ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ತಂಡವನ್ನು ಅಭಿನಂದಿಸಿದರು.

https://pragati.taskdun.com/sslc-examhukkeri-studenthfather-death/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button