*ಕುವೆಂಪು ನಗರದಲ್ಲಿ ಮಹಿಳೆಯರ ಬಹುಮುಖಿ ಸಾಧನೆ ಬಿಂಬಿಸುವ ಲಾಂಛನ ಸ್ಥಾಪನೆ: ಭೂಮಿಪೂಜೆ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಇಲ್ಲಿಯ ಕುವೆಂಪು ನಗರದ ಕೆಎಲ್ ಇ ಇಂಟರ್ ನ್ಯಾಷನಲ್ ಸ್ಕೂಲ್ ಬಳಿ ವೃತ್ತದಲ್ಲಿ ಮಹಿಳೆಯರ ಬಹುಮುಖಿ ಸಾಧನೆ ಬಿಂಬಿಸುವ ಪ್ರತಿಮೆ (ಲಾಂಛನ) ಸ್ಥಾಪಿಸಲು ಕ್ರೆಡೈ ಮಹಿಳಾ ವಿಭಾಗದವರು ಮುಂದಾಗಿರುವುದು ಶ್ಲಾಘನೀಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದ್ದಾರೆ.
ಕ್ರೆಡೈ (CREDAI) ಸಂಸ್ಥೆಯ ಮಹಿಳಾ ವಿಭಾಗದ ವತಿಯಿಂದ ಕುವೆಂಪು ನಗರದ ಕೆ.ಎಲ್.ಇ ಇಂಟರ್ ನ್ಯಾಷನಲ್ ಸ್ಕೂಲ್ ವೃತ್ತದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಸೌಂದರ್ಯಿಕರಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ನಂತರ ಸಚಿವರು ಮಾತನಾಡಿದರು.
ಸಮಾಜಮುಖಿ ಕೆಲಸ ಮಾಡುತ್ತಿರುವ ಕ್ರೆಡೈ ಮಹಿಳಾ ವಿಭಾಗದವರು ಸರ್ಕಲ್ ಅಭಿವೃದ್ಧಿಗೆ ಮುಂದಾಗಿರುವುದು ಸಾಗತಾರ್ಹವಾದುದು. ವಿಶೇಷವಾಗಿ ಕುವೆಂಪು ನಗರದಲ್ಲಿರುವ ವೃತ್ತವನ್ನು ಅಭಿವೃದ್ಧಿಗೊಳಿಸುವುದು ಬಹುಮುಖ್ಯ ಕಾರ್ಯವಾಗಿದೆ. ಜೊತೆಗೆ ಸಂಚಾರ ಸಮಸ್ಯೆ ಮುಕ್ತಗೊಳಿಸುವುದು, ವೃತ್ತದ ಸೌಂದರ್ಯವನ್ನು ಹೆಚ್ಚಿಸುವುದು ಅಗತ್ಯವಿದೆ ಎಂದು ಹೇಳಿದರು.
ವೃತ್ತದ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ವಿಶೇಷವಾಗಿ ಸ್ತ್ರೀಶಕ್ತಿ ಮತ್ತು ಆಧುನಿಕ ಕೊಡುಗೆಗಳನ್ನು ಸೂಚಿಸುವ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಒತ್ತಿ ಹೇಳುವ ಶಿಲ್ಪವನ್ನು ವೃತ್ತದೊಳಗೆ ಸ್ಥಾಪಿಸುವ ಗುರಿ ಹೊಂದಿರುವುದು ಹರ್ಷದ ಸಂಗತಿಯಾಗಿದೆ. ಕ್ರೆಡೈ ಮಹಿಳೆಯರ ಈ ನಡೆಗೆ ತಾವು ಪೂರ್ಣ ಸಹಕಾರ ನೀಡುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ರೆಡೈ ಮಹಿಳಾ ವಿಭಾಗದ ಪದಾಧಿಕಾರಿಗಳಾದ ದೀಪಾ ವಾರ್ಡಕರ್, ಕರುಣಾ ಹಿರೇಮಠ್ ಸೇರಿದಂತೆ ಮಹಿಳಾ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ