ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಮತ ಕ್ಷೇತ್ರಗಳಿಗೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
41,535 ಪೋಸ್ಟಲ್ ಬ್ಯಾಲೆಟ್ ಸಂಬಂದಿಸಿದಂತೆ ನಿಗದಿತ ನಮೂನೆಯನ್ನು ಅರ್ಹ ಮತದಾರರ ಮನೆ ಮನೆಗೆ ತೆರಳಿ ನೀಡಲಾಗುತ್ತದೆ. 1 ಸಾವಿರಕ್ಕಿಂತ ಅಧಿಕ ಮತದಾರರು ಇರುವ ಕಡೆ ಉಪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಮಾರ್ಗಸೂಚಿ ಪ್ರಕಾರ ಪೋಸ್ಟಲ್ ಬ್ಯಾಲೆಟ್ ಗೆ ಅಗತ್ಯವಾದ ನಿಗದಿತ ನಮೂನೆಗಳನ್ನು ವಿತರಿಸುವ ಕಾರ್ಯ ಚಾಲ್ತಿಯಲ್ಲಿದೆ.
ಮಾ.23 ರಿಂದ ನಾಮಪತ್ರ ಸ್ವೀಕಾರ:
ಮಾ. 23 ರಿಂದ ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ನಾಮಪತ್ರ ಸ್ವೀಕರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ಸಾವಿರ ರೂಪಾಯಿ ಹಾಗೂ ಪರಿಶಿಷ್ಟ ಜಾತಿ/ವರ್ಗಗಳ ಅಭ್ಯರ್ಥಿಗಳಿಗೆ 12,500 ರೂಪಾಯಿ ಠೇವಣಿ ಮೊತ್ತ ಇರುತ್ತದೆ. ಚುನಾವಣಾ ಆಯೋಗದಿಂದ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚದ ಮಿತಿಯನ್ನು 77 ಲಕ್ಷ ರೂಪಾಯಿ ನಿಗದಿಪಡಿಸಲಾಗಿರುತ್ತದೆ. ಕೋವಿಡ್ ಇರುವುದರಿಂದ ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಜತೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು.
ನಿಯಂತ್ರಣ ಕೊಠಡಿ ಆರಂಭ:
ಮಾದರಿ ನೀತಿಸಂಹಿತೆ 16-3-2021 ರಿಂದ ಜಾರಿಗೆ ಬಂದಿರುತ್ತದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮಾದರಿ ನೀತಿಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಸಾರ್ವಜನಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ಈಗಾಗಲೇ ದೂರು ಸ್ವೀಕಾರ ಕೇಂದ್ರ, ಕಂಟ್ರೋಲ್ ರೂಮ್ ಹಾಗೂ ಸಿವಿಜಿಲ್(24×7) ಕೇಂದ್ರಗಳನ್ನು ಆರಂಭಿಸಲಾಗಿದೆ.
* ಮಾದರಿ ನೀತಿ ಸಂಹಿತೆ: 0831-2406332
* ದೂರು ಸ್ವೀಕಾರ ಕೇಂದ್ರ: 0831-2406325
* ಸಿ-ವಿಜಿಲ್ ಕೇಂದ್ರ: 0831-2406304
ಸಾರ್ವಜನಿಕರು ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದಂತೆ ಈ ಮೇಲ್ಕಂಡ ಕಂಟ್ರೋಲ್ ರೂಮ್ ಗಳಿಗೆ ದೂರು ಸಲ್ಲಿಸಬಹುದು.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 27 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರಗಳನ್ನು ಗುರುತಿಸಲಾಗಿದೆ. ಮತ ಎಣಿಕೆ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಕೋವಿಡ್ ಸೋಂಕಿತ ಅರ್ಹ ಮತದಾರರಿಗೆ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪೋಸ್ಟಲ್ ಬ್ಯಾಲೆಟ್ (ಅಂಚೆ ಮತಪತ್ರ) ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
ಕೋವಿಡ್ ಮಾರ್ಗಸೂಚಿ ಮತ್ತು ನೀತಿ ಸಂಹಿತೆಯನ್ನು ಆಧರಿಸಿ ಹಬ್ಬಹರಿದಿನಗಳು, ಜಯಂತಿಗಳು, ಸಭೆ-ಸಮಾರಂಭಗಳಿಗೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಮಾದರಿ ನೀತಿಸಂಹಿತೆ ಪಾಲನೆ, ಮತದಾನ, ಮತ ಎಣಿಕೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದಂತೆ ಪೊಲೀಸ್ ಭದ್ರತೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿಯನ್ನು ನೀಡಿದರು.
ಪೋಲಿಂಗ್ ಸ್ಟೇಶನ್ ಬಳಿಯಲ್ಲಿ ವ್ಯವಸ್ಥಿತ ಪೊಲೀಸ್ ಬಂದೋಬಸ್ತ್ ಜೊತೆಗೆ ಸೆಕ್ಟರ್ ಅಧಿಕಾರಿ ನೇಮಕ ನೇಮಕ ಮಾಡಲಾಗಿದೆ.
ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಯಾವುದೇ ಅಕ್ರಮ ರೀತಿಯ ಸಾಗಾಣಿಕೆ ಜೊತೆಗೆ ಕೋವಿಡ್ ತಪಾಸಣೆಯನ್ನು ಚೆಕ್ ಪೋಸ್ಟ್ ಗಳಲ್ಲಿ ಮಾಡಲಾಗುತ್ತದೆ.
ಅಕ್ರಮ ಮದ್ಯ ಮಾರಾಟ ಕುರಿತು ಜಾಗ್ರತೆ ವಹಿಸಲಾಗಿದೆ. ವೈನ್ ಶಾಪ್ ಗಳಿಗೆ ಈ ಕುರಿತು ಅಬಕಾರಿ ಇಲಾಖೆಯಿಂದ ಮಾಹಿತಿ ರವಾನಿಸಲಾಗಿದ್ದು, ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಲು ತಿಳಿಸಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಸ್ಥಳಗಳಲ್ಲಿ ಸುರಕ್ಷಿತ ಪೊಲೀಸ್ ಕಾವಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ ತಿಳಿಸಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಲೋಕಸಭಾ ಉಪಚುನಾವಣೆ: ಒಟ್ಟು 18.07 ಲಕ್ಷ ಮತದಾರರು
ಉಪಚುನಾವಣೆ: ನಾಳೆಯಿಂದಲೇ ನಾಮಪತ್ರ ಸಲ್ಲಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ