ಪ್ರಗತಿವಾಹಿನಿ ಸುದ್ದಿ; ಕಾರವಾರ: ಹೆದ್ದಾರಿ ರಸ್ತೆಯಲ್ಲಿ ಪ್ರಯಾಣಿಕರನ್ನು ಹೆದರಿಸಿ ದರೋಡೆ ಮಾಡುತ್ತಿದ್ದ ಹಾಗೂ ಜಾತ್ರೆ, ಸಂತೆಯಂತಹ ಜನ ಸಂದಣಿ ಪ್ರದೇಶದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಭದ್ರಾವತಿ ಹಾಗೂ ಶಿಕಾರಿಪುರದ 7 ಜನ ಕಳ್ಳರ ತಂಡವನ್ನು ಭೇದಿಸಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಳಿಯೂರ ಹೊಸ್ಕೆರಿ ನಿವಾಸಿ ಆಸಿಫ್ ತಂದೆ ಅಬ್ದುಲ್ ರೆಹಮಾನ್(35) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಸೇರಿದಂತೆ ಏಳು ಜನರು ಒಂದು ತಂಡ ರಚಿಸಿಕೊಂಡು ಕೆ.ಎ 02, ಎಮ್.ಎಚ್. 4151 ಸಂಖ್ಯೆಯ ಕಾರ್‌ನಲ್ಲಿ ಶಿಕಾರಿಪುರದಿಂದ ಕಾರವಾರಕ್ಕೆ ಬಂದಿದ್ದಾರೆ. ನಂತರದಲ್ಲಿ ಕಾರವಾರ ಹಾಗೂ ಗೋವಾ ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನಗಳಲ್ಲಿ ಓಡಾಡುವ ಜನರ ಬಳಿಯಿರುವ ಹಣ, ಬಂಗಾರದ ಆಭರಣಗಳು ಹಾಗೂ ಮೊಬೈಲ್‌ಗಳನ್ನು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದರು ಎಂದರು.
ಕಾರವಾರದ ಬೈತಖೊಲ್‌ನ ಸಿದ್ದರಾಮೇಶ್ವರ ಮಠದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಏಳು ಜನ ಕಳ್ಳರ ತಂಡ ಭಾನುವಾರ ರಾತ್ರಿ ಹಾಗೂ ಸೋಮವಾರದ ಬೆಳಗಿನ ಜಾವ ತಮ್ಮ ಕಾರ್‌ನಲ್ಲಿ 2 ಕಬ್ಬಿಣದ ಕತ್ತಿ, 2 ಕಟ್ಟಿಗೆಯ ದೊಣ್ಣೆ, ನೈಲಾನ್ ಹಗ್ಗ, ಖಾರದ ಪುಡಿಯನ್ನು ಇಟ್ಟುಕೊಂಡು ರಸ್ತೆಯಲ್ಲಿ ಓಡಾಡುವ ಜನರನ್ನು ದರೋಡೆ ಮಾಡಲು ನಿಂತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಶಹರ ಪೊಲೀಸ್ ಠಾಣೆ ಪಿಎಸ್‌ಐ ಎಮ್. ಸಂತೋಷ ಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ಐಪಿಸಿ ಸೆಕ್ಷನ್‌ನ ಕಲಂ 399, 402 ಅಡಿ ಪ್ರಕರಣ ದಾಖಲಿಸಿ ಒರ್ವನನ್ನು ಬಂದಿಸಿದ್ದಾರೆ. ಉಳಿದ 6 ಜನರು ತಪ್ಪಿಸಿಕೊಂಡಿದ್ದು, ಆರೋಪಿಗಳ ತಂಡ ದರೋಡೆ ಹಾಗೂ ಕಳ್ಳತನಕ್ಕಾಗಿ ತಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗುವುದು. ಜೊತೆಗೆ ಚುರುಕು ತನಿಖೆ ನಡೆಸಿ ಆದಷ್ಟು ಬೇಗ ತಪ್ಪಿಸಿಕೊಂಡಿರುವ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್‌ಪಿ ಅವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ