ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎಂಇಎಸ್ ಪುಂಡಾಟ ಪ್ರಕರಣದಿಂದ ಉದ್ವಿಗ್ನಗೊಂಡಿದ್ದ ಬೆಳಗಾವಿಯ ಕುರುಬಗಟ್ಟಿ ಧಾಮಣೆ ಗ್ರಾಮದಲ್ಲಿ ಸಧ್ಯ ಪರಿಸ್ಥಿತಿ ಶಾಂತವಾಗಿದ್ದು, ಗಾಯಾಳುಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಬೋರಲಿಂಗಯ್ಯ ತಿಳಿಸಿದ್ದಾರೆ.
ಗ್ರಾಮದಲ್ಲಿ ಸಿದ್ದಣ್ಣ ಹಾಲಪ್ಪ ಸೈಬಣ್ಣವರ ಈತನ ಮದುವೆ ಮೆರೆವಣಿಗೆ ವೇಳೆ ಸಂಭಾಜಿ ವೃತ್ತದ ಬಳಿ ಪಟಾಕಿ ಸಿಡಿಸಲು ಹೋದಾಗ ಆಕಾಶ ಸಿದ್ರಾಯಿ ಯಳ್ಳೂರಕರ ಹಾಗೂ ಮರಾಠಿ ಸಮುದಾಯದ ಇತರರು ಸೇರಿ ಪಟಾಕಿ ಸಿಡಿಸದಂತೆ ತಡೆಯಲು ಹೋದಾಗ ಗಲಾಟೆ ನಡೆದಿದೆ. ಈ ವೇಳೆ ಮೆರವಣಿಗೆಯಲ್ಲಿದ್ದ ಕೆಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಪೊಲೀಸ್‌ರು ಹಾಗೂ ಹಿರಿಯ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಗಾಯಾಳುಗಳಿಗೆ ಚಿಕಿತ್ಸೆ ಕುರಿತು ಆಸ್ಪತ್ರೆಗೆ ದಾಖಲಿಸಿದ್ದು, ಗ್ರಾಮದಲ್ಲಿ ವಾತಾವರಣ ಶಾಂತಿಯುತವಾಗಿದೆ ಎಂದು ತಿಳಿಸಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಣ್ಣ ಸೈಬಣ್ಣವರ ನೀಡಿದ ಪಿರ್ಯಾದಿಯ ಆಧಾರದ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಆರೋಪಿಗಳಾದ ಆಕಾಶ ಸಿದ್ರಾಯಿ ಯಳ್ಳೂರಕರ, ಯಲ್ಲಪ್ಪಾ ಪರಶುರಾಮ ರೇಮಾನಾಚೆ, ಅಜಯ ಶಿವಾಜಿ ಯಳ್ಳೂರಕರ, ಸಂತೋಷ ಪರಶುರಾಮ ರೇಮಾನಾಚೆ, ಪ್ರಸಾದ ಶಂಕರ ರೇಮಾನಾಚೆ, ಮಾರುತಿ ಯಲ್ಲಪ್ಪಾ ರೇಮಾನಾಚೆ, ಮಹೇಶ ಪರಶುರಾಮ ಮರಗಣ್ಣಾಚೆ, ಜಗನ್ನಾಥ ವಿಠ್ಠಲ ರೇಮಾನಾಚೆ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯ ಹಾಗೂ ತನಿಖೆ ಮುಂದುವರೆದಿದೆ. ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ ಮುಂದುವರೆಸಲಾಗಿದೆ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ