ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸೇನಾ ಭರ್ತಿ ಆಯ್ಕೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಪ್ರಮಾಣಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಇಲ್ಲಿನ ವಿಟಿಯು ಕ್ರೀಡಾಂಗಣದಲ್ಲಿ ಫೆ.4ರಿಂದ ಆರಂಭಗೊಂಡ ಸೇನಾ ಭರ್ತಿ ರ್ಯಾಲಿಗೆ ಹಸಿರುನಿಶಾನೆ ತೋರಿಸಿ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ನೇಮಕಾತಿ ರ್ಯಾಲಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಬೆಳಗಾವಿ ಸೇರಿದಂತೆ ಆರು ಜಿಲ್ಲೆಗಳ ಅಭ್ಯರ್ಥಿಗಳು ಆನ್ ಲೈನ್ ನೋಂದಣಿ ಮಾಡಿದ್ದರು. ರ್ಯಾಲಿಗೆ ಒಟ್ಟು 62,217 ಅಭ್ಯರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಬೆಳಗಾವಿ ಜಿಲ್ಲೆಯ 51,423 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಮೊಬೈಲ್ ಶೌಚಾಲಯ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಪೊಲೀಸ್ ಭದ್ರತೆ ಒದಗಿಸಿದ್ದು, ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಿಂದ ವಿಟಿಯು ಗೆ ವಿಶೇಷ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ದಾಖಲೆಯ ನೋಂದಣಿ:
ಸೇನೆಯ ಸೇರ್ಪಡೆಗೆ ಕೋವಿಡ್-19 ಪರಿಸ್ಥಿತಿಯಲ್ಲಿ ದಾಖಲೆಯ ಸಂಖ್ಯೆಯ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಬೆಳಗಾವಿ, ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಅಭರ್ಥಿಗಳು ಭಾಗವಹಿಸಿದ್ದಾರೆ. ಕರ್ನಾಟಕದಲ್ಲಿ ಅತೀ ಹೆಚ್ಚು ಜನರು ಸೇನೆಗೆ ಸೇರಲು ಉತ್ಸುಕರಾಗಿದ್ದಾರೆ. ಅಂದಾಜು ಐದು ಸಾವಿರ ಜನರನ್ನು ಆಯ್ಕೆ ಮಾಡಲಾಗುವುದು ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ಪೀರನವಾಡಿಯ ಮೂರು ಕಲ್ಯಾಣಮಂಟಪಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಾವಿರಾರು ಅಭ್ಯರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದಾರೆ. ಎಲ್ಲರಲ್ಲೂ ದೇಶಸೇವೆಯ ಮನೋಭಾವ ಎದ್ದು ಕಾಣುತ್ತಿದೆ ಎಂದು ಜಿಲ್ಲಾಧಿಕಾರಿ ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಬ್ರಿಗೇಡಿಯರ್ ಎ.ಎಸ್.ವಾಳಿಂಬೆ, ಆಯ್ಕೆ ಬಳಿಕ ರೆಜಿಮೆಂಟಿನಿಲ್ಲಿ ಎರಡು ವರ್ಷ ತರಬೇತಿಯನ್ನು ನೀಡಿದ ಬಳಿಕ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಸೇನಾ ಭರ್ತಿ ರ್ಯಾಲಿಯ ಉಸ್ತುವಾರಿ ವಹಿಸಿದ್ದ ಕರ್ನಲ್ ರಾಹುಲ್ ಆರ್ಯ ಮತ್ತಿತರರು ಉಪಸ್ಥಿತರಿದ್ದರು.
ಫೆ.4 ರಿಂದ 15 ರವರೆಗೆ ರ್ಯಾಲಿ ನಡೆಯಲಿದ್ದು, ಆನ್ ಲೈನ್ ನಲ್ಲಿ ಹೆಸರು ನೋಂದಾಯಿಸಿದವರು ಭಾಗವಹಿಸಲಿದ್ದಾರೆ.
ಕೋವಿಡ್ ತಪಾಸಣೆ ಅಗತ್ಯವಿಲ್ಲ; ಜಿಲ್ಲಾಧಿಕಾರಿಗಳ ಸ್ಪಷ್ಟನೆ:
ಬೆಳಗಾವಿಯ ವಿಟಿಯು ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭಗೊಂಡಿರುವ ಸೇನಾ ಭರ್ತಿ ರ್ಯಾಲಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕೋವಿಡ್-19 ಪರೀಕ್ಷೆ ಅಥವಾ ತಪಾಸಣಾ ವರದಿಯ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ಪಷ್ಟಪಡಿಸಿದ್ದಾರೆ.
ಆರ್.ಟಿ.ಪಿ.ಸಿ.ಆರ್ ಅಥವಾ ಆಂಟಿಜೆನ್ ಸೇರಿದಂತೆ ಯಾವುದೇ ರೀತಿಯ ಕೋವಿಡ್ ಪರೀಕ್ಷೆಯ ಅಗತ್ಯವಿಲ್ಲ. ಆದರೆ ಲಕ್ಷಣ ಇಲ್ಲದಿರುವ ಬಗ್ಗೆ ಯಾವುದಾದರೂ ವೈದ್ಯರಿಂದ ಪಡೆದಿರುವ ಪತ್ರವಿದ್ದರೆ ಸಾಕು ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ