ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕದೊಂದಿಗೆ ಕಾಲು ಕೆದರಿ ಜಗಳ ತೆಗೆಯುತ್ತಿರುವ ಶಿವಸೇನೆಯ ನಾಯಕರ ವರ್ತನೆಯ ಬಗ್ಗೆ ಕರ್ನಾಟಕದ ಸಂಸದರ ಗಮನ ಸೆಳೆಯುವದಾಗಿ ಹಾಗೂ ರಾಜ್ಯಸಭೆಯಲ್ಲಿ ಕರ್ನಾಟಕದ ಪರವಾಗಿ ಧ್ವನಿ ಎತ್ತುವದಾಗಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರು ಇಂದು ಬೆಳಗಾವಿಯಲ್ಲಿ ತಮ್ಮ ಕಚೇರಿಯಲ್ಲಿ ನಡೆದ ಕನ್ನಡ ಹೋರಾಟಗಾರರ ಸಭೆಯಲ್ಲಿ ಭರವಸೆ ನೀಡಿದರು.
ಇದೇ ಫೆಬ್ರುವರಿ 13 ರಂದು ಮುಂಬಯಿ ಶಿವಸೇನಾ ಸಂಸದ ರಾಹುಲ್ ಶೆವಾಳೆ ಅವರು ಲೋಕಸಭೆಯಲ್ಲಿ ಗಡಿವಿವಾದ ಪ್ರಸ್ತಾಪಿಸಿದರಲ್ಲದೇ ಸರ್ವೋನ್ನತ ನ್ಯಾಯಾಲಯದಲ್ಲಿರುವ ಗಡಿವಿವಾದ ಪ್ರಕರಣವು ಇತ್ಯರ್ಥವಾಗುವವರೆಗೆ ಬೆಳಗಾವಿಯನ್ನು ಕೇಂದ್ರ ಶಾಸಿತ ಪ್ರದೇಶವನ್ನಾಗಿ ಘೋಷಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದರು.ಈ ಸಂದರ್ಭದಲ್ಲಿ ಕರ್ನಾಟಕದ ಯಾವದೇ ಸಂಸದರು ಕರ್ನಾಟಕದ ಪರವಾಗಿ ಧ್ವನಿ ಎತ್ತಲಿಲ್ಲ.ಇದನ್ನು ಆಕ್ಷೇಪಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ರಾಜ್ಯದ ಎಲ್ಲ ಸಂಸದರಿಗೆ ಪತ್ರವೊಂದನ್ನು ಬರೆದಿತ್ತು. ಈ ಹಿನ್ನೆಲೆಯಲ್ಲಿ ಕಡಾಡಿ ಅವರು ಆಸಕ್ತಿ ವಹಿಸಿ ಇಂದಿನ ಸಭೆ ಕರೆದಿದ್ದರು.
ಗಡಿವಿವಾದ ನೋಡಿಕೊಳ್ಳಲು ಮಹಾರಾಷ್ಟ್ರವು ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿದೆ. ಕರ್ನಾಟಕವು ಕಾನೂನು ಹಾಗೂ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕೆಂದು ಇಂದಿನ ಸಭೆಯಲ್ಲಿ ಒತ್ತಾಯಿಸಲಾಯಿತು. ಗಡಿ ಭಾಗದ ಕನ್ನಡಿಗರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಗಡಿಭಾಗದ ಕನ್ನಡಿಗರ ನಿಯೋಗವೊಂದನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ಯಬೇಕೆಂದು ಆಗ್ರಹಿಸಲಾಯಿತು.
ಈ ಸಭೆಯಲ್ಲಿ ವ್ಯಕ್ತವಾದ ಭಾವನೆಗಳನ್ನು ದಿಲ್ಲಿಯಲ್ಲಿ ನಡೆಯುವ ಸಂಸದರ ಸಭೆಯಲ್ಲಿ ವಿವರಿಸುವದಾಗಿ ಭರವಸೆ ನೀಡಿದ ಕಡಾಡಿ ಅವರು ಮುಖ್ಯಮಂತ್ರಿಗಳ ಭೆಟ್ಟಿಗೆ ನಿಯೋಗವನ್ನು ಕರೆದೊಯ್ಯುವದಾಗಿ ತಿಳಿಸಿದರು. ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕನ್ನಡ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಕಸ್ತೂರಿ ಭಾವಿ, ಮಹಾಂತೇಶ ರಣಗಟ್ಟಿಮಠ, ಬಾಬು ಸಂಗೋಡಿ, ಅಕ್ಷಯ ಪರಮಾಜ ಮುಂತಾದವರು ಮಾತನಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ