*ಚರಂಡಿ ಬಳಿ ನವಜಾತ ಶಿಶುಪತ್ತೆ ಪ್ರಕರಣ: ಪ್ರೇಮಿಗಳ ವಿರುದ್ಧ ಮರ್ಡರ್ ಕೇಸ್ ದಾಖಲು*

ಪ್ರಗತಿವಾಹಿನಿ ಸುದ್ದಿ: ನವಜಾತ ಶಿಶುವನ್ನು ಚರಂಡಿಗೆ ಬಿಸಾಕಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಇದೇ ಮೊದಲ ಬಾರಿಗೆ ಪ್ರೇಮಿಗಳ ವಿರುದ್ಧ ಕೊಲೆ ಕೇಸ್ ದಾಖಲಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮಾ.5ರಂದು ಬೆಳಗಾವಿಯ ಕಿತ್ತೂರಿನ ಅಂಬಡಗಟ್ಟಿ ಗ್ರಾಮದಲ್ಲಿ ತಿಪ್ಪೆಗುಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸರು ಪ್ರೇಮಿಗಳಿಬ್ಬರನ್ನು ಬಂಧಿಸಿದ್ದಾರೆ. ಮಹಾಬಳೇಶ್ ಕಾಮೋಜಿ ಹಾಗೂ ಸಿಮ್ರಾನ್ ಬಂಧಿತ ಆರೋಪಿಗಳು. ಇಬ್ಬರೂ ಅನ್ಯಕೋಮಿನವರಾಗಿದ್ದು, ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೇಮದ ಬಗ್ಗೆ ಎರಡೂ ಕುಟುಂಬಗಳಿಗೆ ಗೊತ್ತಿರಲಿಲ್ಲ. ಅಲ್ಲದೇ ಸಿಮ್ರಾನ್ ಹಾಗೂ ಮಹಾಬಳೇಶ್ ದೈಹಿಕ ಸಂಬಂಧವನ್ನೂ ಹೊಂದಿದ್ದು, ಸಿಮ್ರಾನ್ ಗರ್ಭಿಣಿಯಾಗಿದ್ದಳು.
ಇಬ್ಬರೂ ಒಂದೇ ಓಣಿಯವರಾಗಿದ್ದು, ಸಿಮ್ರಾನ್ ದಪ್ಪಗಿದ್ದ ಕಾರಣಕ್ಕೆ ತುಂಬು ಗರ್ಭಿಣಿಯಾಗಿದ್ದರೂ ಕುಟುಂಬದವರಿಗಾಗಲಿ, ನೆರೆಹೊರೆಯವರಿಗಾಗಲಿ ಆಕೆ ಗರ್ಭಿಣಿ ಎಂಬುದು ಗೊತ್ತಿರಲಿಲ್ಲ. ಮಾ.5ರಂದು ಸಿಮ್ರಾನ್ ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬಾತ್ ರೂಂ ನಲ್ಲೇ ಮಗುವಿಗೆ ಜನ್ಮ ನೀಡಿದ್ದಳು. ವಿಚಾರವನ್ನು ಪ್ರಿಯಕರ ಮಹಾಬಳನಿಗೆ ವಿಡಿಯೋ ಕಾಲ್ ಮಾಡಿ ತಿಳಿಸಿದಳು. ಇಬ್ಬರೂ ಪ್ಲಾನ್ ಮಾಡಿ ನವಜಾತ ಶಿಶುವನ್ನು ಮನೆ ಬಳಿ ಚರಂಡಿಗೆ ಬಿಸಾಕಿದ್ದರು. ಚರಂಡಿ ಬಳಿ ನವಜಾತ ಶಿಶುವಿನ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ನೆರೆಹೊರೆ, ಅಕ್ಕಪಕ್ಕದ ಆಸ್ಪತ್ರೆಗಳಲ್ಲಿ ಮಹೈತಿ ಸಂಗ್ರಹಿಸಿದ ಪೊಲೀಸರು ಅನುಮಾನಗೊಂಡು ಸಿಮ್ರಾನ್ ವಿಚಾರಿಸಿದಾಗ ಕೃತ್ಯದ ವಿಷಯ ಬಹಿರಂಗವಾಗಿದೆ. ಸಿಮ್ರಾನ್ ಮಾಣಿಕಬಾಯಿ ಹಾಗೂ ಮಹಾಬಳೇಶ್ ಕಾಮೋಜಿ ಇಬ್ಬರನ್ನು ಬಂಧಿಸಿರುವ ಪೊಲೀಸರು ಕೊಲೆ ಕೇಸ್ ದಾಖಲಿಸಿದ್ದಾರೆ.