*ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ; ಒತ್ತುವರಿ ಪ್ರಶ್ನಿಸಿದ್ದಕ್ಕೆ ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಥಳಿಸಿದ ಆರೋಪ*
ಪ್ರಗತಿವಾಹಿನಿ ಸುದ್ದಿ: ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಒತ್ತುವರಿ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯ ಬಟ್ಟೆ ಹರಿದು ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಬಡ ಕುಟುಂಬದ ಮಹಿಳೆಯ ಸೀರೆ ಹರಿದು ಅರೆಬೆತ್ತಲೆ ಮಾಡಿ ಮಹಿಳೆ ಹಾಗೂ ಆಕೆಯ ಪತಿ, ಮಗನ ಮೇಲೆ ಹಲ್ಲೆ ನಡೆಸಿದ್ದಾರೆ.
ಐನಾಪುರ ಗ್ರಾಮದ ಸುಭಾಷ್ ದಾನೋಳ್ಳಿ, ಸುರೇಶ್ ದಾನೊಳ್ಳಿ, ಮಾಯಪ್ಪ ಹಳ್ಯಾಳ ಎಂಬುವವರು ಸರ್ಕಾರಿ ರಸ್ತೆಯ ಜೊತೆಗೆ ಬಡ ಮಹಿಳೆಯ ಕುಟುಂಬದ ಜಮೀನು ಒತ್ತುವರಿ ಮಾಡಿಕೊಂಡಿದ್ದರು. ಜಮೀನು ಒತ್ತುವರಿ ಮಾಡಿಕೊಂಡಿದ್ದನ್ನು ಮಹಿಳೆ ಪ್ರಶ್ನಿಸಿದ್ದಾಳೆ. ಈ ವೇಳೆ ಗಲಾಟೆ ನಡೆದಿದ್ದು, ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಪತಿ, ಪುತ್ರನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ತಮಗೆ ರಾಜಕೀಯ ನಾಯಕರ ಸಂಪರ್ಕವಿದೆ ಎಂದು ಬೆದರಿಕೆ ಹಾಕಿದ್ದಾರೆ.
ಮಾರಣಾಂತಿಕವಾಗಿ ಹಲ್ಲೆ ನಡೆಸಿದರೂ ಪೊಲೀಸರು ಗಮನ ಹರಿಸುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ಕುಟುಂಬ ಕಣ್ಣೀರಿಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ