Kannada NewsLatest

ಕೋರೆ ಇರುವಾಗ ಬೆಳಗಾವಿ ಅಲುಗಾಡಿಸಲು ಮಹಾರಾಷ್ಟ್ರಕ್ಕೆ ಸಾಧ್ಯವೇ – ಡಾ. ಸಿದ್ದರಾಮ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಡಾ. ಪ್ರಭಾಕರ ಕೋರೆ ಅಂತಹ ಮೇರು ರಾಜಕಾರಣಿಗಳು ಇರುವಾಗ ಬೆಳಗಾವಿ ಅಲುಗಾಡಿಸಲು ಮಹಾರಾಷ್ಟ್ರಕ್ಕೆ ಸಾಧ್ಯವೇ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗದಗ ತೋಂಟದಾರ್ಯ ಜಗದ್ಗುರು ಡಾ. ಸಿದ್ದರಾಮ ಸ್ವಾಮೀಜಿ ಗುಡುಗಿದರು.

ಲಿಂಗರಾಜ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಾ.ಪ್ರಭಾಕರ ಕೋರೆ ಅವರಿಗೆ ಕೆಂಗಲ್ ಹನುಮಂತಯ್ಯ ಸಂಸ್ಕ್ರತಿ ದತ್ತಿ ರಾಜ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಾ.ಕೋರೆ ಅಂತ ಮೇರು ರಾಜಕಾರಣಿ ಬೆಳಗಾವಿಯಲ್ಲಿ ಇರುವಾಗ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎನ್ನುವುದು ಹಾಸ್ಯಾಸ್ಪದ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎಂಬ ಭ್ರಮೆಯಲ್ಲಿರುವ ಮಹಾರಾಷ್ಟ್ರ ಸರಕಾರ ಮತ್ತು ಅಂತಹ ಕೂಗಾಟದಲ್ಲಿ ಬೆಳಗಾವಿಯಲ್ಲಿ ತೊಡಗಿರುವ ಕೆಲ ನಾಡವಿರೋಧಿ ಸಂಘಟನೆಗಳು ಹಗಲುಗನಸು ಬಿಡಬೇಕು, ಅದು ಏಳೇಳು ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಅರಿಯಿರಿ ಎಂದು ಎಂಇಎಸ್ ಮತ್ತು ಮಹಾರಾಷ್ಟ್ರಕ್ಕೆ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಕೆಂಗಲ್ ಹನುಮಂತಯ್ಯನವರು ತಮ್ಮ ವಿಧಾಯಕ ಕಾರ್ಯಗಳನ್ನು ಮಾಡುತ್ತ ಸಮಸ್ತ ಕನ್ನಡಿಗರ ಮಾತಾಗಿದ್ದರು. ನಮ್ಮ ನಾಡುನುಡಿಗಾಗಿ ಶ್ರಮಿಸಿದ ವ್ಯಕ್ತಿ ಅಂತಹ ವ್ಯಕ್ತಿ ಹೆಸರಿನಲ್ಲಿರುವ ಪ್ರತಿಷ್ಠಿತ ಪ್ರಶಸ್ತಿಯನ್ನು ಡಾ.ಪ್ರಭಾಕರ ಕೋರೆಯವರಿಗೆ ನೀಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದರು. ಮನು ಬಳಿಗಾರ ಅವರು ಪ್ರಾದೇಶಿಕ ಸಮಾನತೆಯನ್ನು ಕಾಯ್ದುಕೊಂಡು ಪರಿಷತ್‌ನ್ನು ಮುನ್ನಡೆಸಿದ್ದಾರೆ. ಡಾ.ಕೋರೆಯವರಿಗೆ ನೀಡುವ ಮೂಲಕ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ನುಡಿದರು.

ಕೋರೆ ನಾಯಕತ್ವ ವಹಿಸಬೇಕು – ಸರಜೂ ಕಾಟ್ಕರ್

ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ, ಅಭಿವೃದ್ಧಿ ವಿಷಯದಲ್ಲಿ ಬೆಳಗಾವಿ ತಾತ್ಸಾರ ಆಗಲು ಇಲ್ಲಿನ ರಾಜಕಾರಣಿಗಳಲ್ಲಿ ಇರುವ ಒಡಕು ಮತ್ತು ಗಟ್ಟಿ ನಾಯಕತ್ವದ ಕೊರತೆ ಕಾರಣ. ಅಭಿವೃದ್ಧಿ ಮತ್ತು ನಾಡಿನ ಹಿತಕ್ಕಾಗಿ ಇಲ್ಲಿನ ರಾಜಕಾರಣಿಗಳು ಒಂದಾಗಬೇಕಿದೆ. ಅದಕ್ಕೆ ನಾಯಕತ್ವದ ಕೊರತೆ ಇದೆ. ಬೆಳಗಾವಿ ಜನರ ದನಿಗೆ ಶಕ್ತಿ ಕೊಡಲು ಸರ್ವಪಕ್ಷಗಳ ನಾಯಕನ ಅಗತ್ಯ ಇಂದು ಇದ್ದು ಪಕ್ಷಬೇದ ಹೊರತಾಗಿ ಬೆಳಗಾವಿ ಅಭಿವೃದ್ಧಿಗೆ ಡಾ. ಪ್ರಭಾಕರ ಕೋರೆ ನಾಯಕತ್ವ ವಹಿಸಬೇಕು ಎಂದು ಡಾ.ಸರಜೂ ಕಾಟಕರ ಒತ್ತಾಯಿಸಿದರು.

ಡಾ.ಪ್ರಭಾಕರ ಕೋರೆಯವರು ಬೆಳಗಾವಿ ಮತ್ತು ರಾಜ್ಯದ ಗಡಿಭಾಗಗಳಲ್ಲಿ ಕನ್ನಡ ಮರಾಠಿ ಸಂಸ್ಕೃತಿಯ ಕೊಂಡಿಯಾಗಿ ಬೆಳೆದವರು. ಕನ್ನಡ ಮತ್ತು ಇಲ್ಲಿನ ಸಂಸ್ಕೃತಿಯ ದುಪ್ಪಟ್ಟು ಬೆಳವಣಿಗೆ ಮತ್ತು ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಡಾ. ಕೋರೆ ಮತ್ತು ಡಾ. ಸಿದ್ಧರಾಮ ಮಹಾಸ್ವಾಮೀಜಿ ಕಾರಣ ಎಂದರು.

ಕಸಾಪ ಸಮ್ಮೇಳನಗಳಲ್ಲಿ ಊಟಕ್ಕೆ ಚೀಟಿ ಕೊಡುವ ಪದ್ಧತಿ ನಿರ್ಮೂಲನೆ ಮಾಡಿದವರು ಡಾ. ಕೋರೆ. ಉತ್ತರ ಕರ್ನಾಟಕದ ಸಮಸ್ಯೆಗಳು ಸರಕಾರದ ಅರಿವಿಗೆ ಬರಲು ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭಿಸಿ ನಡೆಸಲು ಡಾ. ಕೋರೆ ಕಾರಣ, ಬೆಳಗಾವಿಯಲ್ಲಿ ರಾಣ ಚನ್ನಮ್ಮ ವಿಶ್ವವಿದ್ಯಾಲಯ ಪ್ರಾರಂಭವಾಗಲು ಡಾ. ಕೋರೆ ಪ್ರಯತ್ನ ಅಗಾಧವಾದದ್ದು, ಸರ್. ಎಂ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿ ರಚನೆ ಆಗಲು ಡಾ.ಕೋರೆಯವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ  ಡಾ.ಪ್ರಭಾಕರ ಕೋರೆ, ಕನ್ನಡಾಭಿಮಾನ ಮನೆತನದಿಂದ ಬಂದಿದೆ. ತಂದೆಯವರು ಅಂಕಲಿಯಲ್ಲಿ ಪ್ರಥಮ ಏಕೀಕರಣ ಸಮ್ಮೇಳವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಿದರು. ಕನ್ನಡ ಶಾಲೆ ತೆರೆದರು. ಕನ್ನಡ ಸಂಸ್ಕೃತಿಯ ಬೀಜವನ್ನು ಭಿತ್ತದರು. ಅವರ ಸಂಸ್ಕಾರದ ಫಲವೇ ಗಡಿಭಾಗದಲ್ಲಿ ಕನ್ನಡ ಸೇವೆ ಮಾಡಲು ಸಾಧ್ಯವಾಯಿತು ಎಂದು. ಇಂದು ದೊರೆತಿರುವ ಈ ಪ್ರಶಸ್ತಿ ಕೆಎಲ್‌ಇ ಸಂಸ್ಥೆಯ ಪ್ರತಿಫಲವಾಗಿ ಸಾಧ್ಯವಾಗಿದೆ. ಈ ಪ್ರಶಸ್ತಿಯ ಗೌರವ ಸಪ್ತರ್ಷಿಗಳಿಗೆ ಹಾಗೂ ಸಮಸ್ತ ಕೆಎಲ್‌ಇ ಸಂಸ್ಥೆಗೆ ಸಲ್ಲಬೇಕೆಂದು ಹೇಳಿದರು. ಅಖಂಡ ಕರ್ನಾಟಕ ಕನ್ನಡಿಗರ ಮನಸ್ಸು ಇನ್ನೂ ಒಂದಾಗಿಲ್ಲ. ಹಳೆ ಮೈಸೂರು- ಬೆಂಗಳೂರು ಭಾಗಕ್ಕೆ ಸೀಮಿತವಾಗಿದ್ದು ಈಗ ಬೆಳಗಾವಿಗೂ ಸೇರಿ ಬಂದಿದೆ. ಕರ್ನಾಟಕದಲ್ಲಿ ವಾಸಿಸುವ ಎಲ್ಲ ಕನ್ನಡಿಗರ ಮನಸ್ಸು ಒಂದಾಗಬೇಕಿದೆ. ಮೂವತ್ತು ಜಿಲ್ಲೆಗಳ ಸಂಸ್ಕೃತಿ ಮತ್ತು ಸ್ವಾಭಿಮಾನ ಒಂದಾದಾಗ ಕರ್ನಾಟಕ ಏಕೀಕರಣದ ಆಶಯ ಇನ್ನೂ ಗಟ್ಟಿಗೊಳ್ಳುತ್ತದೆ ಎಂದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ ಅವರು, ಅಭಿವೃದ್ಧಿಗಾಗಿ ಪ್ರತಿಭಟನೆಗಳು ಎಷ್ಟೇ ಉಗ್ರವಾಗಿ ನಮ್ಮ ರಾಜ್ಯದಲ್ಲಿ ನಡೆಯಲಿ, ಆದರೆ ರಾಜ್ಯದ ಒಡಕಿನ ಮಾತುಗಳು ಎಂದೂ ಯಾವ ಭಾಗದಿಂದಲೂ ಕೇಳಿಬರಬಾರದು ಎಂದು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮನು ಬಳಿಗಾರ ಮನವಿ ಮಾಡಿದರು. ಕರ್ನಾಟಕದ ಏಕೀಕರಣಕ್ಕೆ ಹಲವಾರು ಮಹನೀಯರು ದುಡಿದು ಅಳಿದಿದ್ದಾರೆ. ಇಂದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಭಿವೃದ್ಧಿ ಮರಿಚೀಕೆ ಆಗಿದೆ, ಸರಕಾರಗಳು ಸಂಪೂರ್ಣ ನಿರ್ಲಕ್ಷಿಸಿವೆ. ಸರಕಾರಗಳು ಗಮನ ಹರಿಸಿ ಬೆಳಗಾವಿ ಸಹಿತ ಎಲ್ಲ ಜಿಲ್ಲೆಗಳ ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿದ ಅವರು, ಯಾವುದೇ ಕಾರಣಕ್ಕೂ ಒಡಕಿನ ಧ್ವನಿ ಏಳಬಾರದು ಎಂದು ಮನವಿ ಮಾಡಿದರು.

ಕಸಾಪ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಮಹೇಶ ಗುರನಗೌಡರ ಹಾಗೂ ಮಹಾಂತೇಶ ಮೆಣಸಿನಕಾಯಿ ನಿರೂಪಿಸಿದರು. ಡಾ. ಎಚ್.ಎಂ. ಚನ್ನಪ್ಪಗೋಳ ವಂದಿಸಿದರು. ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷೆ  ರತ್ನಪ್ರಭಾ ಬೆಲ್ಲದ, ಜ್ಯೋತಿ ಬಾದಾಮಿ, ಪ್ರೊ.ಎ.ಬಿ.ಕೊರಬು, ಕೆಎಲ್‌ಇ ಸಂಯೋಜಕರಾದ ಡಾ.ಎಂ.ಟಿ.ಕುರಣಿ , ಕೆಎಲ್‌ಇ ಸಂಸ್ಥೆಯ ಆಜೀವ ಸದಸ್ಯರಾದ ಡಾ.ಪ್ರಕಾಶ ಕಡಕೋಳ, ಮಹಾದೇವ ಬಳಿಗಾರ, ಡಾ.ಸತೀಶ ಪಾಟೀಲ, ಪ್ರೊ. ಎಸ್.ಜಿ.ನಂಜಪ್ಪನವರ, ಲಿಂಗರಾಜ ಕಾಲೇಜು ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ, ಆರ್.ಎಲ್.ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಜ್ಯೋತಿ ಕವಳೇಕರ, ಕ.ಸ.ಪ.ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button