ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ವಿರುದ್ಧ ಬುಧವಾರ ನಗರದ ಅಂಬೇಡ್ಕರ್ ವೃತ್ತದಿಂದ ಅಣುಕು ಶವಯಾತ್ರೆ ನಡೆಸಿದ ವಿವಿಧ ದಲಿತ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸಂಜಯ ಅವರ ಭಾವ ಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿ, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ನಡೆದ ರಾಜಕಾರಣದಲ್ಲಿ ಮಾತಿನ ಭರದಲ್ಲಿ ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲ ಒಬ್ಬ ಹೆಣ್ಣು ಎನ್ನದೆ ಅವಾಚ್ಯವಾಗಿ ನಿಂಧಿಸಿದ್ದು ಖಂಡನೀಯ. ಮಹಿಳೆಯರ ಬಗ್ಗೆ ಗೌರವ ಕೊಡುವ ಬಿಜೆಪಿಯಲ್ಲಿ ಇಂಥವರು ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಮನವಿಯಲ್ಲಿ ಖಂಡಿಸಿದ್ದಾರೆ.
ಸಂಜಯ ಪಾಟೀಲ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾಗ ಜನರ ಕಷ್ಟಕ್ಕೆ ಸ್ಪಂದಿಸುವುದಾಗಲಿ, ಅಭಿವೃದ್ಧಿ ಪಡಿಸುವುದಾಗಲಿ ಎಂದಿಗೂ ಮಾಡಲಿಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕರಾದ ಬಳಿಕ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಜತೆಗೆ ಈ ಭಾಗದ ಜನರ ಸಂಕಷ್ಟಗಳಿಗೆ ಮನೆ ಮಗಳಾಗಿ ಮುಂದೆ ನಿಂತು ಬಗೆ ಹರಿಸಿದ್ದಾರೆ. ಇವರ ಏಳಿಗೆ ಸಹಿಸದ ಸಂಜಯ ಪಾಟೀಲ ಮಾತಿನ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದು ಬಿಜೆಪಿಗೆ ಶೋಭೆ ತರುವುದಿಲ್ಲ. ಸಂಜಯ ಪಾಟೀಲ ಕೂಡಲೇ ಶಾಸಕಿ ಹೆಬ್ಬಾಳ್ಕರ್ ಅವರಿಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬಿಜೆಪಿಯಿಂದ ಇವರನ್ನು ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಜೀತೇಂದ್ರ ಕಾಂಬಳೆ, ಮಲ್ಲೇಶ ಚೌಗುಲೆ, ಯಲ್ಲಮ್ಮ ಪಾಟೀಲ, ಅರುಣ ತೇಲಗಾರ, ಸುಭಾಷ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಜಯ್ ಪಾಟೀಲ್ ಗೆ ಎದುರಾಯ್ತು ಮತ್ತೊಂದು ಸಂಕಷ್ಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ