ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಆಬ್ಬರ ಜೋರಾಗಿದ್ದು, ವರುಣಾಘಾತಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸೇತುವೆಗಳು ಜಲಾವೃತವಾಗಿವೆ.
ಮಹಾ ಮಳೆಯಿಂದಾಗಿ ಕೃಷ್ಣಾ ನದಿಯ ಒಳಹರಿವು ಹೆಚ್ಚಾಗಿದ್ದು, ಚಿಕ್ಕೋಡಿಯ ಮತ್ತೆರಡು ಸೇತುವೆಗಳು ಜಲಾವೃತವಾಗಿವೆ. ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ. ಕಲ್ಲೋಳ-ಯಡೂರ, ಮಲಿಕವಾಡ-ದತ್ತವಾಡ ಸೇತುವೆಗಳು ಜಲಾವೃತವಾಗಿ, ಅಪಾಯದ ಮಟ್ಟದಲ್ಲಿದೆ. ರಸ್ತೆಗಳಿಗೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕರಾವಳಿ, ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆಯಬ್ಬರ ಜೋರಾಗಿದೆ. ಕರಾವಳಿಯ ಹಲವು ಭಾಗಗಳಲ್ಲಿ ಮಳೆಯಬ್ಬರದಿಂದಾಗಿ ರಸ್ತೆಗಳಲ್ಲಿ ನೀರು ತುಂಬಿದ್ದು, ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಾಳಿ ನದಿ ಭಾಗದಲ್ಲಿ ಸತತ ಮಳೆಯಿಂದಾಗಿ ಜಲಾಶಯದ ಒಳಹರಿವಿನ ಪ್ರಮಾಣ ಏರಿಕೆಯಾಗಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ.
ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 62 ಮಿ.ಮೀ ಮಳೆ ಸುರಿದಿದ್ದು, ಎಲ್ಲೋ ಅಲರ್ಟ್ ಮುಂದುವರಿದಿದೆ. ಬ್ರಹ್ಮಾವರ ತಾಲೂಕಿನಲ್ಲಿ ಸಿಡಿಲು ಬಡಿತಕ್ಕೆ 5 ಮನೆ, 2 ಕೊಟ್ಟಿಗೆಗಳು ಭಾಗಶಃ ಹಾನಿಗೊಳಗಾಗಿದ್ದು, ಸುಮಾರು 1.75 ಲಕ್ಷ ರೂ. ನಷ್ಟವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ