ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ತ್ವರಿತ ಪತ್ತೆಗಾಗಿ ಆಯಾ ಗ್ರಾಮಗಳಲ್ಲಿಯೇ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರ್ಯಾಟ್) ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಹುಕ್ಕೇರಿ ತಾಲ್ಲೂಕಿನ ಹುಲ್ಲೊಳ್ಳಿ ಹಾಗೂ ಹತ್ತರಗಿ ಗ್ರಾಮದಲ್ಲಿ ಸೋಮವಾರ (ಮೇ 24) ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರ್ಯಾಟ್)ಗೆ ಚಾಲನೆ ನೀಡಿದ ಅವರು, ಕೋವಿಡ್ ತ್ವರಿತ ಪತ್ತೆಗಾಗಿ ಎಲ್ಲ ಗ್ರಾಮಗಳಲ್ಲಿ ರ್ಯಾಟ್ ನಡೆಸಲು ನಿರ್ಧರಿಸಲಾಗಿದ್ದು, ಮೊದಲ ದಿನವೇ (ಮೇ 24) ಜಿಲ್ಲೆಯ 135 ಗ್ರಾಮಗಳಲ್ಲಿ ಏಕಕಾಲಕ್ಕೆ ರ್ಯಾಟ್ ಶಿಬಿರ ನಡೆಸಲಾಗಿದೆ.
ಉಳಿದ ಗ್ರಾಮಗಳಲ್ಲೂ ಕೂಡ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಡೆಸಲಾಗುವುದು. ಇದಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಗ್ರಾಮ ಪಂಚಾಯತಿ ಟಾಸ್ಕ್ ಫೋರ್ಸ್ ಮೂಲಕ ರ್ಯಾಟ್ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಪರೀಕ್ಷೆ ಮತ್ತು ವರದಿ ವಿಳಂಬವಾಗುತ್ತಿರುವುದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮಗಳಲ್ಲಿಯೇ ಕೋವಿಡ್ ಪರೀಕ್ಷೆಯನ್ನು ಆರಂಭಿಸಲಾಗಿದೆ. ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಸೋಂಕಿತರ ಸಂಪರ್ಕಿತರನ್ನು ಆಯಾ ಗ್ರಾಮಗಳಲ್ಲಿಯೇ ಪರೀಕ್ಷಿಸಲಾಗುವುದು. ರ್ಯಾಟ್ ನಲ್ಲಿ ಸೋಂಕು ದೃಢಪಟ್ಟರೆ ಅಂತಹವರನ್ನು ತಕ್ಷಣವೇ ಸ್ಥಳೀಯ ಕೋವಿಡ್ ಕೇರ್ ಕೇಂದ್ರಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ತಂಡ ಗ್ರಾಮದಲ್ಲಿ ಕೋವಿಡ್ ಪರೀಕ್ಷಾ ಶಿಬಿರ ಏರ್ಪಡಿಸಿದಾಗ ಶೀತ, ಜ್ವರದ ಲಕ್ಷಣಗಳಿರುವ ಗ್ರಾಮಸ್ಥರು ಸ್ವಯಂಪ್ರೇರಣೆಯಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ರ್ಯಾಟ್ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟರೆ ಯಾರೂ ಧೃತಿಗೆಡಬಾರದು. ಸೋಂಕಿತರ ಚಿಕಿತ್ಸೆಗಾಗಿ ಸ್ಥಳೀಯವಾಗಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಸೋಂಕಿತರಿಗೆ ಉಚಿತವಾಗಿ ಊಟೋಪಚಾರದ ಜತೆಗೆ ಸರಕಾರದ ಮಾರ್ಗಸೂಚಿ ಪ್ರಕಾರ ಔಷಧೋಪಚಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.
ಗ್ರಾಮದ ಇಬ್ಬರಲ್ಲಿ ಸೋಂಕು ಪತ್ತೆ:
ಹುಕ್ಕೇರಿ ತಾಲ್ಲೂಕಿನ ಹುಲ್ಲೋಳಿಯಲ್ಲಿ 39 ಜನರಿಗೆ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದಾಗ ಅದರಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಯಿತು.
ಇಬ್ಬರನ್ನೂ ತಕ್ಷಣವೇ ಕೋವಿಡ್ ಕೇರ್ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ಇನ್ನುಳಿದ 37 ಜನರ ವರದಿ ನೆಗೆಟಿವ್ ಬಂದಿದ್ದರೂ ಒಂದು ವೇಳೆ ಲಕ್ಷಣಗಳು ಕಂಡುಬಂದರೆ ಅಂತಹವರ ಮಾದರಿಯನ್ನು ಆರ್.ಟಿ.-ಪಿ.ಸಿ.ಆರ್ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಮನೆ ಮನೆಗೆ ತೆರಳಿ ಕೋವಿಡ್ ಜಾಗೃತಿ:
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಹುಲ್ಲೋಳಿ ಗ್ರಾಮದಲ್ಲಿ ಸಂಚರಿಸಿ ಕೋವಿಡ್ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಗ್ರಾಮ ಪಂಚಾಯತಿ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಜತೆ ಚರ್ಚೆ ನಡೆಸಿದ ಅವರು, ಸೋಂಕಿತರ ಮನವೊಲಿಸುವ ಮೂಲಕ ಕೂಡಲೇ ಅವರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಹೇಳಿದರು.
ಜನತಾ ಕಾಲನಿಯಲ್ಲಿ ಐಸೋಲೇಷನ್ ನಲ್ಲಿರುವ ಕೆಲ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಅವರು ಆರೋಗ್ಯವನ್ನು ವಿಚಾರಿಸಿದರು. ನಂತರ ಗ್ರಾಮದ ಮನೆ ಮನೆಗೆ ತೆರಳಿದ ಜಿಲ್ಲಾಧಿಕಾರಿ ಹಿರೇಮಠ ಅವರು, ಅನಗತ್ಯವಾಗಿ ಯಾರೂ ಹೊರಗಡೆ ಸಂಚರಿಸಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಆಗಾಗ ಸಾಬೂನು ಅಥವಾ ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಗಡಿ ಚೆಕ್ ಪೋಸ್ಟ್ ಪರಿಶೀಲನೆ:
ಇದಾದ ಬಳಿಕ ಮಹಾರಾಷ್ಟ್ರ ರಾಜ್ಯ ಸಂಪರ್ಕಿಸುವ ಉಳ್ಳಾಗಡ್ಡಿ-ಖಾನಾಪುರದಲ್ಲಿ ಸ್ಥಾಪಿಸಲಾಗಿರುವ ಗಡಿ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಹತ್ತರಗಿ ಗ್ರಾಮಕ್ಕೂ ಕೂಡ ಭೇಟಿ ನೀಡಿ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಹತ್ತರಗಿ ಗ್ರಾಮದಲ್ಲಿ ಕೂಡ ಸೋಂಕಿತರ ಸಂಪರ್ಕಿತರು ಹಾಗೂ ಸೋಂಕಿನ ಲಕ್ಷಣಗಳನ್ನು ಹೊಂದಿರುವವರಿಗೆ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರ್ಯಾಟ್) ಮಾಡಲಾಯಿತು.
ಮೊದಲ ಸೋಲಾರ್ ಹೆರಿಗೆ ಆಸ್ಪತ್ರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ