*ಬೆಳಗಾವಿಯಲ್ಲಿ ಲಾಂಗು, ಮಚ್ಚು ಹಿಡಿದು ರೀಲ್ಸ್ ಮಾಡಿದ ಯುವಕರು: ಎಸ್ ಪಿ ಖಡಕ್ ವಾರ್ನಿಂಗ್*

ಪ್ರಗತಿವಾಹಿನಿ ಸುದ್ದಿ: ಇತ್ತೀಚೆಗೆ ಬಿಗ್ ಬಾಸ್ ಸ್ಫರ್ಧಿಗಳಾದ ವಿನಯ್ ಹಾಗೂ ರಜತ್ ಲಾಂಗ್ ಹಿಡಿದು ರೀಲ್ಸ್ ಮಾಡಿ ಬಂಧನಕ್ಕೀಡಾಗಿ ಜಾಮೀನು ಮೇಲೆ ಹೊರ ಬಂದಿರುವ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಬೆಳಗಾವಿಯಲ್ಲಿಯೂ ಯುವಕರ ಗುಂಪು ಲಾಂಗು, ಮಚ್ಚು, ಪಿಸ್ತೂಲ್ ಹಿಡಿದು ರೀಲ್ಸ್ ಮಾಡಿರುವ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ ಪಿ ಭೀಮಾಶಂಕರ್ ಗುಳೇದ್, ಕೆಲ ಯುವಕರು ಕೈಯಲ್ಲಿ ಮಚ್ಚು, ಮೇಲ್ನೋಟಕ್ಕೆ ಆಟಿಕೆಯ ಪಿಸ್ತೂಲ್ ನಂತಿರುವುದನ್ನು ಹಿಡಿದು ರೀಲ್ಸ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಗಾಗಲೇ ಹಲವು ಬಾರಿ ಆಯುಧಗಳನ್ನು ಪ್ರದರ್ಶನ ಮಾಡದಂತೆ ಎಚ್ಚರಿಸಿದ್ದೇವೆ. ಈ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗಿದೆ. ಆದಾಗ್ಯೂ ಆಯುಧಗಳನ್ನು ಹಿಡಿದು ರೀಲ್ಸ್ ಮಾಡಿರುವುದು ಬೆಳಕಿಗೆ ಬಂದಿದೆ.
ರೀಲ್ಸ್ ಮಾಡಿರುವ ಯುವಕರನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಮಾರಕಾಸ್ತ್ರಗಳನ್ನು ಹಿಡಿದು ಸಾಮಾಜಿಕ ಜಾಲತಾಣಗಳ್ಲಲಿ ರೀಲ್ಸ್ ವಿಡಿಯೋ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇಂತಹ ರೀಲ್ಸ್ ಹುಚ್ಚಾಟಕ್ಕೆ ಆಯುಧಗಳನು ಹಿಡಿದು ಶಿಕ್ಷೆಗೆ ಗುರಿಯಾಗಬೇಡಿ ಎಂದು ತಿಳಿಸಿದ್ದಾರೆ.